ಕರ್ನಾಟಕ

karnataka

ETV Bharat / briefs

'ರಾಜ್ಯಕ್ಕೆ ತಕ್ಷಣ 50 ಸಾವಿರ ಆ್ಯಂಫೊಟೆರಿಸಿನ್ ಬಿ ಇಂಜೆಕ್ಷನ್ ಪೂರೈಸಿ' - Eshwar khandre News

ರಾಜ್ಯದಲ್ಲಿ ಪ್ರಸ್ತುತ ಕೋವಿಡ್​ನಿಂದ ಗುಣವಾದ 2 ಸಾವಿರಕ್ಕೂ ಹೆಚ್ಚು ಜನರಲ್ಲಿ ಕಪ್ಪು ಶಿಲೀಂಧ್ರದ ಸೋಂಕು ಕಾಣಿಸಿಕೊಂಡಿದೆ. ಇವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ತಕ್ಷಣವೇ ರಾಜ್ಯಕ್ಕೆ 50 ಸಾವಿರ ಆ್ಯಂಫೊಟೆರಿಸಿನ್ ಬಿ ಪೂರೈಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ.

Eshwar Khandre
Eshwar Khandre

By

Published : Jun 6, 2021, 3:19 PM IST

ಬೆಂಗಳೂರು: ಕೇಂದ್ರ ಸರ್ಕಾರ ತಕ್ಷಣವೇ ರಾಜ್ಯಕ್ಕೆ 50 ಸಾವಿರ ಆ್ಯಂಫೊಟೆರಿಸಿನ್ ಬಿ ಇಂಜೆಕ್ಷನ್ ಪೂರೈಸಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ.

ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಕೋವಿಡ್ ಸೋಂಕಿತರ, ಮರಣ ಹೊಂದಿದವರ ಸುಳ್ಳು ಅಂಕಿ ಅಂಶ ನೀಡಿದ ಸರ್ಕಾರ, ಈಗ ಕಪ್ಪುಶಿಲೀಂಧ್ರ ಸೋಂಕಿನಿಂದ ನರಳುತ್ತಿರುವವರ ಮತ್ತು ಸಾವಿಗೀಡಾಗುತ್ತಿರುವವರ ಸಂಖ್ಯೆಯಲ್ಲೂ ಅಸ್ಪಷ್ಟ ಮಾಹಿತಿ ನೀಡುತ್ತಿದೆ. ಇದರಿಂದ ರಾಜ್ಯಕ್ಕೆ ಸೂಕ್ತ ಪ್ರಮಾಣದಲ್ಲಿ ಚುಚ್ಚುಮದ್ದು ಹಂಚಿಕೆಯಾಗುತ್ತಿಲ್ಲ. ರಾಜ್ಯದಲ್ಲಿ ಈ ಚುಚ್ಚುಮದ್ದಿನ ತೀವ್ರ ಕೊರತೆ ಉಂಟಾಗಿದೆ ಎಂದು ಆಕ್ಷೇಪಿಸಿದ್ದಾರೆ.

ರಾಜ್ಯದಲ್ಲಿ ಪ್ರಸ್ತುತ ಕೋವಿಡ್​ನಿಂದ ಗುಣವಾದ 2 ಸಾವಿರಕ್ಕೂ ಹೆಚ್ಚು ಜನರಲ್ಲಿ ಕಪ್ಪು ಶಿಲೀಂಧ್ರದ ಸೋಂಕು ಕಾಣಿಸಿಕೊಂಡಿದೆ. ಇವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ. ಇವರಿಗೆ ನಿತ್ಯ 4 ರಿಂದ 5 ಆ್ಯಂಫೊಟೆರಿಸಿನ್ ಬಿ ಚುಚ್ಚುಮದ್ದು ನೀಡಬೇಕಾಗುತ್ತದೆ. ಆದರೆ, ರಾಜ್ಯಕ್ಕೆ ಪೂರೈಕೆ ಆಗುತ್ತಿರುವುದು ಕೆಲವೇ ಸಾವಿರ, ಹೀಗಾಗಿ ಸೋಂಕಿತರ ಪಾಡು ಹೇಳತೀರದಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದ ಬೀದರ್​ನಿಂದ ಚಾಮರಾಜನಗರದವರೆಗೆ ಎಲ್ಲ ಕಡೆಯೂ ಆ್ಯಂಫೊಟೆರಿಸಿನ್ ಬಿ ಚುಚ್ಚುಮದ್ದಿನ ತೀವ್ರ ಕೊರತೆ ಎದುರಾಗಿದೆ. ಆದರೂ ಆರೋಗ್ಯ ಇಲಾಖೆ ಇತ್ತ ಗಮನ ಹರಿಸದಿರುವುದು ನಿಜಕ್ಕೂ ಶೋಚನೀಯ ಸಂಗತಿ. ಇವರಿಗೆ ಜನರ ಕಾಳಜಿಯೇ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.

ರಾಜ್ಯದ ಸಂಸತ್ ಸದಸ್ಯರೇ ಕೇಂದ್ರ ರಾಸಾಯನಿಕ ಸಚಿವರಾಗಿದ್ದರೂ ಸೂಕ್ತ ಪ್ರಮಾಣದಲ್ಲಿ ಔಷಧ ಹಂಚಿಕೆ ಆಗುತ್ತಿಲ್ಲ. 25 ಬಿಜೆಪಿ ಸಂಸದರು ನಾಡಿನ ಜನರ ಜೀವ ಉಳಿಸಲು ಚುಚ್ಚುಮದ್ದು ಕೇಳಲೂ ಬಾಯಿ ಇಲ್ಲದವರಾಗಿದ್ದಾರೆ. ಕೂಡಲೇ ಕೇಂದ್ರ ಸರ್ಕಾರ ಕನಿಷ್ಠ 50 ಸಾವಿರ ಆ್ಯಂಫೊಟೆರಿಸಿನ್ ಬಿ ಪೂರೈಸುವ ಮೂಲಕ 2 ಸಾವಿರ ಸೋಂಕಿತರ ಪ್ರಾಣ ಉಳಿಸಬೇಕು ಎಂದು ಖಂಡ್ರೆ ಆಗ್ರಹಿಸಿದ್ದಾರೆ.

ABOUT THE AUTHOR

...view details