ನವದೆಹಲಿ: ಇರಾನ್ ಮೇಲೆ ಅಮೆರಿಕ ವಿಧಿಸಿದ ಆಮದು ದಿಗ್ಬಂಧನ ಮೇ 2ರಿಂದ ಜಾರಿಗೆ ಬರುತ್ತಿದ್ದು, ಒಪೆಕ್ ರಾಷ್ಟ್ರಗಳು ಹೆಚ್ಚುವರಿ ಉತ್ಪಾದಿಸಬೇಕು- ಬೇಡವೆ ಎಂಬುದರ ಕುರಿತು ರಷ್ಯಾ- ಸೌದಿ ಅರೇಬಿಯಾ ಹಾಗೂ ಅಮೆರಿಕ ವ್ಯತಿರಿಕ್ತವಾದ ಹೇಳಿಕೆ ನೀಡುತ್ತಿವೆ.
ಇರಾನ್ನಿಂದ ಆಮದು ಮಾಡಿಕೊಳ್ಳಲು ನೀಡಿದ ವಿನಾಯ್ತಿ ಕೊನೆಗೊಂಡ ತಕ್ಷಣವೇ ಹೆಚ್ಚುವರಿ ಕಚ್ಚಾ ತೈಲ ಉತ್ಪಾದನೆ ಏರಿಕೆ ಮಾಡುವುದಿಲ್ಲ ಎಂದು ಸೌದಿ ಅರೇಬಿಯಾ ಹಾಗೂ ರಷ್ಯಾ ಸ್ಪಷ್ಟಪಡಿಸಿವೆ.
ಒಂದು ಹಂತದವರೆಗೆ ಉತ್ಪಾದನೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳುವ ದೃಷ್ಟಿಯ8ಇಂದ ಒಪೆಕ್ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಒಪ್ಪಂದವು ಜುಲೈವರೆಗೂ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಹೆಚ್ಚುವರಿ ತೈಲ ಉತ್ಪಾದಿಸುವ ಸಾಧ್ಯತೆ ಇಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.
ದರ ಏರಿಕೆ ತಗ್ಗಿಸಲು ಉತ್ಪಾದನೆ ಹೆಚ್ಚಿಸುವಂತೆ ಮಾಡಿರುವ ಮನವಿಗೆ ಸೌದಿ ಅರೇಬಿಯಾ ಹಾಗೂ ಒಪೆಕ್ನ ಕೆಲವು ಸದಸ್ಯ ರಾಷ್ಟ್ರಗಳು ಒಪ್ಪಿಗೆ ನೀಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ತೈಲ ಮಾರುಕಟ್ಟೆಗೆ ಪೂರೈಕೆ ಹೆಚ್ಚಿಸುವ ಕುರಿತು ಸೌದಿ ಅರೇಬಿಯಾ ಮತ್ತು ಇತರೆ ಉತ್ಪಾದಕ ದೇಶಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಎಲ್ಲರೂ ಸಹಮತ ನೀಡಿದ್ದಾರೆ ಎಂದು ಟ್ವೀಟರ್ನಲ್ಲಿ ತಿಳಿಸಿದ್ದಾರೆ.
ಇರಾನ್ನಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳಲು ಭಾರತವನ್ನೂ ಒಳಗೊಂಡು 8 ದೇಶಗಳಿಗೆ ಅಮೆರಿಕ ನೀಡಿದ್ದ ವಿನಾಯ್ತಿ ಮೇ 2ಕ್ಕೆ ಕೊನೆಗೊಳ್ಳಲಿದೆ. ವಿನಾಯ್ತಿಯನ್ನು ಮತ್ತೆ ವಿಸ್ತರಿಸಲದೇ ಇರಲು ಅಮೆರಿಕ ನಿರ್ಧರಿಸಿದೆ. ಹೀಗಾಗಿ, ಈ ಎಂಟು ದೇಶಗಳು ಇರಾನ್ನಿಂದ ಆಮದು ಮಾಡಿಕೊಳ್ಳುತ್ತಿರುವ ರಫ್ತು ಪ್ರಮಾಣವನ್ನು ಸಂಪೂರ್ಣವಾಗಿ ನಿಲ್ಲಸಬೇಕಿದೆ.