ಹೈದರಾಬಾದ್:ಹನ್ನೊಂದು ಆವೃತ್ತಿಯನ್ನು ಯಶಸ್ವಿಯಾಗಿ ಪೂರೈಸಿ ಸದ್ಯ ಹನ್ನೆರಡನೇ ಆವೃತ್ತಿಯ ಕೊನೆಯ ಹಂತಕ್ಕೆ ಬಂದಿರುವ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ನ ಕ್ರೇಜ್ ಮಾತ್ರ ಕೊಂಚವೂ ಕಮ್ಮಿ ಆಗಿಲ್ಲ. ಇದಕ್ಕೆ ತಾಜಾ ಉದಾಹರಣೆ ಇಲ್ಲಿದೆ.
ಹೈದರಾಬಾದ್ನ ರಾಜೀವ್ಗಾಂಧಿ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಈ ಬಾರಿಯ ಐಪಿಎಲ್ನ ಫೈನಲ್ ಪಂದ್ಯ ಆಯೋಜನೆಯಾಗಿದೆ. ಈ ಮ್ಯಾಚ್ ನೋಡಲು ಅಭಿಮಾನಿಗಳ ಕಾತರ ಎಷ್ಟಿದೆ ಎಂದರೆ ಜಸ್ಟ್ ಎರಡೇ ನಿಮಿಷದಲ್ಲಿ ಪಂದ್ಯದ ಅಷ್ಟೂ ಟಿಕೆಟ್ ಮಾರಾಟವಾಗಿದೆ.
ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಫೈನಲ್ ಪಂದ್ಯದ ಟಿಕೆಟ್ ಮಾರಾಟವನ್ನು ಖಾಸಗಿ ಸಂಸ್ಥೆಗೆ ನೀಡಿತ್ತು. ಯಾವುದೇ ಪೂರ್ವಭಾವಿ ಘೋಷಣೆಗಳಿಲ್ಲದೆ ಖಾಸಗಿ ಸಂಸ್ಥೆ ಟಿಕೆಟ್ ಮಾರಾಟ ಮಾಡಿದೆ. ಮಂಗಳವಾರ ಮಧ್ಯಾಹ್ನ ಎರಡು ಗಂಟೆ ವೇಳೆ ಟಿಕೆಟ್ ಆನ್ಲೈನ್ನಲ್ಲಿ ಲಭ್ಯವಾಗಿತ್ತು. ಕ್ರಿಕೆಟ್ ಪ್ರಿಯರು ಮುಗಿಬಿದ್ದು ಖರೀದಿಗಿಳಿದ ಪರಿಣಾಮ ಎರಡು ನಿಮಿಷ ಅಂದಾಜಿನಲ್ಲಿ ಸೋಲ್ಡ್ಔಟ್ ಆಗಿದೆ.
ಹೈದರಾಬಾದ್ನ ರಾಜೀವ್ಗಾಂಧಿ ಸ್ಟೇಡಿಯಂ 39,000 ಸೀಟುಗಳನ್ನು ಹೊಂದಿದೆ. ಆದರೆ ಈ ಖಾಸಗಿ ಸಂಸ್ಥೆಗೆ ಎಷ್ಟು ಟಿಕೆಟ್ ಮಾರಾಟಕ್ಕೆ ಅನುಮತಿ ನೀಡಲಾಗಿತ್ತು ಎನ್ನುವುದು ತಿಳಿದಿಲ್ಲ. 1,500ದಿಂದ ಆರಂಭವಾದ ಟಿಕೆಟ್ ಬೆಲೆ 5000ವರೆಗೂ ಇತ್ತು. ಲೀಗ್ ಹಂತದ ಪಂದ್ಯಗಳ ವೇಳೆ ಟಿಕೆಟ್ ಬೆಲೆ 500ರಿಂದ ಆರಂಭವಾಗಿತ್ತು.