ಚೆನ್ನೈ:ತವರು ನೆಲದಲ್ಲಿ ಸಾಂಘಿಕ ಪ್ರದರ್ಶನ ತೋರಿದ ಚೆನ್ನೈ ಸೂಪರ್ ಕಿಂಗ್ಸ್ ಎದುರಾಳಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಆರು ವಿಕೆಟ್ಗಳಿಂದ ಮಣಿಸಿ ಮತ್ತೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಸನ್ರೈಸರ್ಸ್ ನೀಡಿದ 176 ರನ್ಗಳ ಗುರಿಯನ್ನು ಬೆನ್ನಟ್ಟಿದ ಸೂಪರ್ಕಿಂಗ್ಸ್ಗೆ ಉತ್ತಮ ಆರಂಭ ದೊರೆಯಲಿಲ್ಲ. ಆರಂಭಿಕ ಆಟಗಾರ ಫಫ್ ಡು ಪ್ಲೆಸಿಸ್ ಕೇವಲ ಒಂಟಿ ರನ್ಗೆ ನಿರ್ಗಮಿಸಿದರು.
ಆ ಬಳಿಕ ಜೊತೆಯಾದ ಐಪಿಎಲ್ ಸ್ಪೆಷಲಿಸ್ಟ್ ಸುರೇಶ್ ರೈನಾ ಹಾಗೂ ಶೇನ್ ವ್ಯಾಟ್ಸನ್ ಬೌಂಡರಿ, ಸಿಕ್ಸರ್ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸುತ್ತಾ ಸಾಗಿದರು. 24 ಎಸೆತದಲ್ಲಿ ಮಿಂಚಿನ 38 ರನ್ ಗಳಿಸಿದ ರೈನಾ, ರಶೀದ್ ಖಾನ್ಗೆ ವಿಕೆಟ್ ಒಪ್ಪಿಸಿದರು.
ಟೂರ್ನಿಯುದ್ದಕ್ಕೂ ಸತತ ವೈಫಲ್ಯ ಅನುಭವಿಸಿದ್ದ ಶೇನ್ ವ್ಯಾಟ್ಸನ್ ಉತ್ತಮ ಫಾರ್ಮ್ ಕಂಡುಕೊಂಡರು. ಇವರಿಗೆ ಅಂಬಟಿ ರಾಯುಡು(21) ಉತ್ತಮ ಸಾಥ್ ನೀಡಿದರು. ಐದನೇ ಐಪಿಎಲ್ ಶತಕದ ಸನಿಹದಲ್ಲಿ ಎಡವಿದ ವ್ಯಾಟ್ಸನ್ 96 ರನ್ ಗಳಿಸಿದ್ದಾಗ ಭುವನೇಶ್ವರ್ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಕೊನೆಯಲ್ಲಿ ಜಾಧವ್ ತಂಡಕ್ಕೆ ಅರ್ಹ ಜಯ ತಂದಿತ್ತರು.
ಸನ್ರೈಸರ್ಸ್ ಪರ ರಶೀದ್ ಖಾನ್, ಭುವನೇಶ್ವರ್ ಕುಮಾರ್ ಹಾಗೂ ಸಂದೀಪ್ ಶರ್ಮಾ ತಲಾ ಒಂದೊಂದು ವಿಕೆಟ್ ಹಂಚಿಕೊಂಡರು.
ಪ್ಲೇ ಆಫ್ಗೆ ಹಾದಿ ಮತ್ತಷ್ಟು ಸುಗಮ..!
ಸನ್ರೈಸರ್ಸ್ ವಿರುದ್ಧ ಗೆಲುವು ಸಾಧಿಸುವುದರೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್ಗೆ ಚೆನ್ನೈ ಬಹುತೇಕ ಕಾಲಿಟ್ಟಿದೆ. ಚೆನ್ನೈ ತಂಡಕ್ಕೆ ಇನ್ನು ಮೂರು ಪಂದ್ಯಗಳಿದ್ದು ಸದ್ಯ 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.