ಕರ್ನಾಟಕ

karnataka

ETV Bharat / briefs

ಸೋಲು,ಗೆಲುವಿನ 'ಲೆಕ್ಕಾಚಾರ'ದ ಆಟ! ಒಂದು ಸ್ಥಾನಕ್ಕೆ ನಾಲ್ಕು ತಂಡಗಳ ಹೋರಾಟ!

ಚೆನ್ನೈ ಸೂಪರ್ ಕಿಂಗ್ಸ್ ಮೊದಲ ತಂಡವಾಗಿ ಪ್ಲೇ ಆಫ್​ಗೆ ಕಾಲಿಟ್ಟರೆ, ಡೆಲ್ಲಿ ಕ್ಯಾಪಿಟಲ್ಸ್ ನಂತರದಲ್ಲಿ ಈ ಹಂತಕ್ಕೇರಿತ್ತು. ಸದ್ಯ ನಾಲ್ಕನೇ ಸ್ಥಾನಕ್ಕೆ ನಾಲ್ಕು ತಂಡಗಳು ಸೆಣಸಾಟ ನಡೆಸಲಿವೆ.

ಪ್ಲೇ ಆಫ್​

By

Published : May 3, 2019, 12:36 PM IST

ಹೈದರಾಬಾದ್:ಸನ್​​ರೈಸರ್ಸ್​ ಹೈದರಾಬಾದ್ ತಂಡವನ್ನು ಸೂಪರ್​ ಓವರ್​ನಲ್ಲಿ ಮಣಿಸಿ ಮೂರನೇ ತಂಡವಾಗಿ ಮುಂಬೈ ಇಂಡಿಯನ್ಸ್ ಪ್ಲೇ ಆಫ್​ಗೆ ಎಂಟ್ರಿ ಕೊಟ್ಟಿದೆ.

ಚೆನ್ನೈ ಸೂಪರ್ ಕಿಂಗ್ಸ್ ಮೊದಲ ತಂಡವಾಗಿ ಪ್ಲೇ ಆಫ್​ಗೆ ಕಾಲಿಟ್ಟಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ನಂತರದಲ್ಲಿ ಈ ಹಂತಕ್ಕೇರಿತ್ತು. ಸದ್ಯ ನಾಲ್ಕನೇ ಸ್ಥಾನಕ್ಕೆ ನಾಲ್ಕು ತಂಡಗಳು ಸೆಣಸಾಟ ನಡೆಸಲಿವೆ.

ಪಾಯಿಂಟ್ ಪಟ್ಟಿಯಲ್ಲಿ ಸನ್‌​ರೈಸರ್ಸ್​ ಹೈದರಾಬಾದ್ 12 ಅಂಕ, ರಾಜಸ್ಥಾನ ರಾಯಲ್ಸ್ 11 ಅಂಕ, ಕೋಲ್ಕತ್ತಾ ನೈಟ್​ರೈಡರ್ಸ್​ 10 ಅಂಕ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ 10 ಅಂಕಗಳನ್ನು ಹೊಂದಿದ್ದು ಪ್ಲೇ ಆಫ್​​ ಆಸೆಯನ್ನು ಈ ನಾಲ್ಕೂ ತಂಡಗಳು ಹೊಂದಿವೆ.

ಸನ್​ರೈಸರ್ಸ್​ ಹೈದರಾಬಾದ್:

ಗುರುವಾರ ನಡೆದ ಪಂದ್ಯದಲ್ಲಿ ಹೈದರಾಬಾದ್ ತಂಡ ಮುಗ್ಗರಿಸಿದ್ದರೂ ಪ್ಲೇ ಆಫ್​​ ಸಾಧ್ಯತೆಯನ್ನು ಉಳಿಸಿಕೊಂಡಿದೆ. ಶನಿವಾರ ಆರ್​ಸಿಬಿ ವಿರುದ್ಧ ಹೈದರಾಬಾದ್ ಆಡಲಿದ್ದು ಈ ಪಂದ್ಯ ನಿರ್ಣಾಯಕವಾಗಿರಲಿದೆ.

ಶನಿವಾರದ ಮ್ಯಾಚ್‌ನಲ್ಲಿ ಒಂದ್ವೇಳೆ ಹೈದರಾಬಾದ್ ಸೋತಲ್ಲಿ ನೆಟ್​ ರನ್​ರೇಟ್ ಲೆಕ್ಕಾಚಾರದಲ್ಲಿ ಪ್ಲೇ ಆಫ್​​​ ಹಾದಿ ನಿರ್ಧಾರವಾಗಲಿದೆ. ಇನ್ನು, ಆರ್​ಸಿಬಿ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ.

ಕೋಲ್ಕತ್ತಾ ನೈಟ್​ರೈಡರ್ಸ್​:

ಕೆಕೆಆರ್​ ತಂಡಕ್ಕೆ ಇನ್ನೆರಡು ಪಂದ್ಯಗಳಿದ್ದು ಎರಡನ್ನೂ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಿಸುತ್ತಿದೆ. ಕೆಕೆಆರ್ ಇಂದು ಕಿಂಗ್ಸ್ ಇವೆಲೆನ್ ಪಂಜಾಬ್, ಭಾನುವಾರದಂದು ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.

ಮುಂಬೈ ಈಗಾಗಲೇ ಪ್ಲೇ ಆಫ್​ ಅರ್ಹತೆ ಗಿಟ್ಟಿಸಿಕೊಂಡಿರುವುದು ಕೆಕೆಆರ್ ಪಾಲಿಗೆ ಆಶಾದಾಯಕ ಬೆಳವಣಿಗೆಯಾಗಿದೆ. ಆದರೆ, ಪಂಜಾಬ್ ತಂಡ ಇನ್ನೂ ಪ್ಲೇ ಆಫ್​ ಹಾದಿಯಲ್ಲಿದ್ದು, ಕೆಕೆಆರ್ ವಿರುದ್ದದ ಪಂದ್ಯ ಗೆಲ್ಲಲೇಬೇಕಿದೆ.

ಕಿಂಗ್ಸ್ ಇಲೆವೆನ್ ಪಂಜಾಬ್:

ಪಂಜಾಬ್ ತಂಡ ಇನ್ನೆರಡು ಪಂದ್ಯವನ್ನಾಡಲಿದ್ದು ಅವೆರಡೂ ನಿರ್ಣಾಯಕವಾಗಿರಲಿದೆ. ಇಂದು ಕೆಕೆಆರ್, ಭಾನುವಾರದಂದು ಸಿಎಸ್​ಕೆ ವಿರುದ್ದ ಪಂಜಾಬ್ ಆಡಲಿದೆ. ಸಿಎಸ್​ಕೆ ಕ್ವಾಲಿಫೈ ಆಗಿರುವುದರಿಂದ ಪಂಜಾಬ್ ವಿರುದ್ಧದ ಪಂದ್ಯ ಸಿಎಸ್​ಕೆ ಪಾಲಿಗೆ ಅಷ್ಟೇನು ಮಹತ್ವವಿಲ್ಲ. ಆದರೆ, ಕೆಕೆಆರ್​ ಹಾಗೂ ಪಂಜಾಬ್ ತಂಡದ ಇಂದಿನ ಸೆಣಸಾಟ ಎರಡೂ ತಂಡಕ್ಕೆ ನಿರ್ಣಾಯಕವಾಗಲಿದೆ.

ರಾಜಸ್ಥಾನ ರಾಯಲ್ಸ್:

ರಾಜಸ್ಥಾನ ತಂಡಕ್ಕೆ ಕೊನೆಯ ಪಂದ್ಯ ಉಳಿದಿದ್ದು ಈಗಾಗಲೇ ಪ್ಲೇ ಆಫ್​ಗೆ ಅರ್ಹತೆ ಗಿಟ್ಟಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಶನಿವಾರ ನಡೆಯುವ ಪಂದ್ಯದಲ್ಲಿ ಗೆಲುವಿಗಾಗಿ ಹೋರಾಟ ನಡೆಸಲಿದೆ.

ಡೆಲ್ಲಿ ವಿರುದ್ಧ ಜಯಗಳಿಸಿದರೂ ರಾಜಸ್ಥಾನದ ಪ್ಲೇ ಆಫ್​ ಹಾದಿ ಸುಗಮವಾಗುವುದಿಲ್ಲ. ಅತ್ತ ಹೈದರಾಬಾದ್ ತಂಡ ಎರಡೂ ಪಂದ್ಯ ಸೋಲಬೇಕು ಹಾಗೂ ಕೆಕೆಆರ್​ ಮತ್ತು ಪಂಜಾಬ್ ತಂಡಗಳು ಕೊನೆಯ ಎರಡು ಪಂದ್ಯದಲ್ಲಿ ಒಂದನ್ನು ಸೋಲಬೇಕು. ಇವೆಲ್ಲಾ 'ಲೆಕ್ಕಾಚಾರ'ಗಳು ಸಾಧ್ಯವಾದಲ್ಲಿ ಮಾತ್ರ ರಾಜಸ್ಥಾನ ರಾಯಲ್ಸ್ ಪ್ಲೇ ಆಫ್​​ಗೆ ಟಿಕೆಟ್ ಪಡೆದುಕೊಳ್ಳಲಿದೆ.

ABOUT THE AUTHOR

...view details