ಜೈಪುರ:ಮೈದಾನದಲ್ಲಿ ಸದಾ ತಮ್ಮ ತಾಳ್ಮೆಯ ವರ್ತನೆಗೆ ಕೂಲ್ ಕ್ಯಾಪ್ಟನ್ ಎಂದು ಹೆಸರಾಗಿರುವ ಎಂ.ಎಸ್.ಧೋನಿ ನಿನ್ನೆಯ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದ ಕೊನೆಯಲ್ಲಿ ಏಕಾಏಕಿ ಉಗ್ರರೂಪ ತಾಳಿ ಎಲ್ಲರ ಅಚ್ಚರಿಗೂ ಕಾರಣರಾಗಿದ್ದರು.
ರೋಚಕ ಘಟದಲ್ಲಿ ಪಂದ್ಯದ ಕೊನೆಯ ಒವರ್ನಲ್ಲಿ ಅಂಪೈರ್ಗಳ ಎಡವಟ್ಟಿಗೆ ಸಿಟ್ಟಿಗೆದ್ದ ಧೋನಿ ಪೆವಿಲಿಯನ್ನಿಂದ ಸೀದಾ ಕ್ರೀಸ್ನತ್ತ ಆಗಮಿಸಿ ಅಂಪೈರ್ಗಳ ತಪ್ಪನ್ನು ಪ್ರಶ್ನೆ ಮಾಡಿದ್ದಾರೆ. ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಧೋನಿಗೆ ಪಂದ್ಯದ ಶೇ.50ರಷ್ಟು ದಂಡ ವಿಧಿಸಲಾಗಿದೆ.
ಪಂದ್ಯ ಮುಕ್ತಾಯವಾಗುತ್ತಿದ್ದಂತೆ ಬಿಡುಗಡೆಯಾದ ಐಪಿಎಲ್ನ ಮಾಧ್ಯಮ ಪ್ರಕಟಣೆಯಲ್ಲಿ ಧೋನಿ ಟೂರ್ನಿಯ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಈ ಕಾರಣಕ್ಕೆ ಪಂದ್ಯದ ಶೇ.50ರಷ್ಟು ದಂಡ ವಿಧಿಸಲಾಗಿದೆ ಎಂದು ತಿಳಿಸಲಾಗಿದೆ.
ಆಗಿದ್ದೇನು..?
ಕೊನೆಯ ಮೂರು ಎಸೆತದಲ್ಲಿ ಚೆನ್ನೈ ಗೆಲುವಿಗೆ ಹತ್ತು ರನ್ಗಳ ಅವಶ್ಯಕತೆ ಇತ್ತು. ಈ ವೇಳೆ ಬೆನ್ ಸ್ಟೋಕ್ಸ್ ಎಸೆದ ಎಸೆತವನ್ನು ಮುಖ್ಯ ಅಂಪೈರ್ ಆರಂಭದಲ್ಲಿ ನೋಬಾಲ್ ಎಂದು ಸನ್ನೆ ಮಾಡಿ ತಕ್ಷಣವೇ ಹಿಂಪಡೆದರು. ಆದರೆ ಲೆಗ್ ಅಂಪೈರ್ ನೋಬಾಲ್ ಸಿಗ್ನಲ್ ನೀಡಿರಲಿಲ್ಲ. ಇದು ಆ ಕ್ಷಣಕ್ಕೆ ಅಂಪೈರ್ಗಳ ಮಧ್ಯೆಯೇ ಗೊಂದಲ ಕಾರಣವಾಗಿತ್ತು.
ಅದೇ ಒವರ್ನಲ್ಲಿ ಔಟಾಗಿ ಪೆವಿಲಿಯನ್ಗೆ ತೆರಳಿದ್ದ ಧೋನಿ ಅಂಪೈರ್ಗ ಎಡವಟ್ಟಿಗೆ ಕೋಪಗೊಂಡು ನೇರವಾಗಿ ಕ್ರೀಸಿಗೆ ಆಗಮಿಸಿದರು. ಕೆಲ ಹೊತ್ತು ಅಂಪೈರ್ಗಳ ಜೊತೆಗೆ ವಾಗ್ವಾದ ನಡೆಸಿ ತಮ್ಮ ಆಕ್ರೋಶ ಹೊರ ಹಾಕಿದರು. ಸದ್ಯ ಇದೇ ವಿಚಾರಕ್ಕೆ ಧೋನಿ ದಂಡ ತೆರಬೇಕಾಗಿದೆ.