ಬೆಂಗಳೂರು: ಪ್ಲೆ ಆಫ್ನಿಂದ ಹೊರಬಿದ್ದಿರುವ ಆರ್ಸಿಬಿ ಇಂದು ತನ್ನ ಕೊನೆಯ ಪಂದ್ಯದಲ್ಲಿ ಪ್ಲೇ ಆಫ್ ನಿರೀಕ್ಷೆಯಲ್ಲಿರುವ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಾಡಲಿದೆ.
ಪ್ಲೇ ಆಫ್ ತಲುಪಲು ಸನ್ರೈಸರ್ಸ್ಗೆ ಆರ್ಸಿಬಿ ವಿರುದ್ಧ ತನ್ನ ಕೊನೆಯ ಪಂದ್ಯವನ್ನು ಗೆಲ್ಲಲೇಬೇಕಿದೆ. ಇಂದು ಗೆದ್ದರೆ ಪ್ಲೇ ಆಫ್ಗೆ 4 ನೇ ತಂಡವಾಗಿ ಎಂಟ್ರಿ ಕೊಡಲಿದೆ. ಇನ್ನು ಪ್ಲೇ ಆಫ್ ರೇಸ್ನಿಂದ ಹೊರಬಿದ್ದಿರುವ ಆರ್ಸಿಬಿ ಇಂದು ನಡೆಯುವ ತನ್ನ ಕೊನೆಯ ಪಂದ್ಯವನ್ನು ತವರಿನ ಅಭಿಮಾನಿಗಳಿಗೆ ಗೆಲುವಿನ ಉಡುಗೊರೆಯಾಗಿ ನೀಡಲು ಕಾತುರದಿಂದ ಕಾಯುತ್ತಿದೆ. ಜೊತೆಗೆ ಸನ್ರೈಸರ್ಸ್ ಪ್ಲೆ ಆಫ್ ಕನಸನ್ನು ನುಚ್ಚುನೂರು ಮಾಡುವ ಆಲೋಚನೆಯಲ್ಲಿದೆ.
ಜೊತೆಗೆ ತನ್ನ ಮೊದಲ ಪಂದ್ಯದಲ್ಲಿ 118 ರನ್ಗಳಿಂದ ಹೀನಾಯವಾಗಿ ಸೋಲನುಭಸಿರುವ ಕೊಹ್ಲಿ ಪಡೆ ತನ್ನ ತವರಿನಲ್ಲಿ ಸನ್ರೈಸರ್ಸ್ಗೆ ಸೋಲುಣಿಸಿ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಕಳೆದ ಪಂದ್ಯ ಮಳೆಯಲ್ಲಿ ಕೊಚ್ಚಿ ಹೋಗಿರುವುದರಿಂದ ಈ ಪಂದ್ಯವನ್ನು ಗೆದ್ದು ಟೂರ್ನಿಯನ್ನು ಗೆಲುವಿನೊಂದಿಗೆ ಅಂತ್ಯ ಮಾಡುವ ಚಿಂತನೆಯಲ್ಲಿದೆ.
ಇತ್ತ ವಾರ್ನರ್ ಇರುವವರೆಗು ಕಠಿಣ ಪೈಪೋಟಿ ನೀಡುತ್ತಿದ್ದ ಸನ್ರೈಸರ್ಸ್ ಇದೀಗ ತನ್ನ ಬಲವನ್ನು ಕಳೆದುಕೊಂಡಿದೆ. ತಂಡದಲ್ಲಿ ಮನೀಷ್ ಪಾಂಡೆ ಹೊರೆತುಪಡಿಸಿದರೆ ಬೇರೆ ಯಾವ ಆಟಗಾರ ಉತ್ತಮ ಪ್ರದರ್ಶನ ತೋರುತ್ತಿಲ್ಲ. ತನ್ನ ಮೊದಲ ಪಂದ್ಯವಾಡಿದ ಗುಪ್ಟಿಲ್ ಉತ್ತಮ ಆರಂಭ ಪಡೆದರು ದೊಡ್ಡ ಮೊತ್ತ ಪೇರಿಸುವಲ್ಲಿ ವಿಫಲರಾದರು. ಬೌಲಿಂಗ್ ವಿಭಾಗದಲ್ಲಿ ಪ್ರಬಲವಾಗಿರುವ ಸನ್ರೈಸರ್ಸ್ ಯಾವ ರೀತಿ ಪ್ರದರ್ಶನ ನೀಡಲಿದೆ ಎಂದು ಕಾದು ನೋಡಬೇಕಿದೆ.
ಮುಖಾಮುಖಿ:
ಎರಡು ತಂಡಗಳು ಐಪಿಎಲ್ನಲ್ಲಿ 13 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 5ರಲ್ಲಿ ಆರ್ಸಿಬಿ, 8 ಪಂದ್ಯಗಳಲ್ಲಿ ಸನ್ರೈರ್ಸ್ ಗೆಲುವು ಸಾಧಿಸಿದೆ. ಬೆಂಗಳೂರಿನಲ್ಲಿ ನಡೆದಿರುವ 7 ಪಂದ್ಯಗಳಲ್ಲಿ 4ರಲ್ಲಿ ಆರ್ಸಿಬಿ, 2 ರಲ್ಲಿ ಸನ್ರೈಸರ್ಸ್ ಗೆಲುವು ಸಾಧಿಸಿದೆ. ಇದೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಸನ್ರೈಸರ್ಸ್ 118 ರನ್ಗಳಿಂದ ಗೆಲುವು ಸಾಧಿಸಿತ್ತು.