ಸೌತಾಂಪ್ಟನ್:ವಿಶ್ವಕಪ್ ತನ್ನ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾದ ಗೆಲುವಿಗಿಂತ ಧೋನಿ ಧರಿಸಿದ್ದ ಗ್ಲೌಸ್ ಸದ್ಯ ಸಾಕಷ್ಟು ಪರ-ವಿರೋಧದದ ಚರ್ಚೆಗೆ ವೇದಿಕೆಯಾಗಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ವೇಳೆ ಧೋನಿ ದರಿಸಿದ್ದ ಭಾರತೀಯ ಸೇನೆಯ ತುಕಡಿ ಪ್ಯಾರಾ ಸ್ಪೆಷಲ್ ಫೋರ್ಸ್ನ ‘ಬಲಿದಾನ’ ಲಾಂಛನವಿರುವ ಗ್ಲೌಸ್ ತೆಗದುಹಾಕುವಂತೆ ಐಸಿಸಿ ಸೂಚಿಸಿದ್ದು, ಇದಕ್ಕೆ ಬಿಸಿಸಿಸಿಐ ನಕಾರ ವ್ಯಕ್ತಪಡಿಸಿದೆ.
ವಿವಾದಕ್ಕೆ ಕಾರಣವಾದ ಧೋನಿ ಧರಿಸಿದ್ದ ಗ್ಲೌಸ್ ಭಾರತೀಯ ಯೋಧರ 'ಬಲಿದಾನ' ಲೋಗೋವಿರುವ ಗ್ಲೌಸ್ ತೊಟ್ಟ ಧೋನಿ: ದೇಶದೆಲ್ಲೆಡೆ ಶ್ಲಾಘನೆ
ಧೋನಿ ಪ್ಯಾರಾಮಿಲಿಟರಿ ರೆಜಿಮೆಂಟಲ್ ಲಾಂಛನವಿರುವ ಗ್ಲೌಸ್ ಧರಿಸಿಲ್ಲ. ಹೀಗಾಗಿ ಇದು ಯಾವುದೇ ಕಾರಣಕ್ಕೂ ಐಸಿಸಿಯ ನಿಯಮ ಉಲ್ಲಂಘನೆ ಆಗುವುದಿಲ್ಲ. ಈ ಕುರಿತಂತೆ ಐಸಿಸಿ ಮನವರಿಕೆ ಮಾಡಿದ್ದೇವೆ ಎಂದು ಸುಪ್ರೀಂಕೋರ್ಟ್ ನೇಮಕ ಮಾಡಿರುವ ನಿರ್ವಾಹಕ ಸಮಿತಿಯ ಮುಖ್ಯಸ್ಥ ವಿನೋದ್ ರೈ ಮಾಧ್ಯಮಗಳಿಗೆ ಉತ್ತರಿಸಿದ್ದಾರೆ.
ಟ್ವಿಟರ್ನಲ್ಲಿ ಧೋನಿ ಗ್ಲೌಸ್ ಟ್ರೆಂಡಿಂಗ್:
ಧೋನಿ ಗ್ಲೌಸ್ ಕುರಿತಾಗಿ ಸಾಕಷ್ಟು ಚರ್ಚೆಗಳಾಗುತ್ತಿರುವಂತೆ ಪ್ರಮುಖ ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಎಲ್ಲರೂ ಒಂದಾಗಿ ಧೋನಿ ಪರವಾಗಿ ಪೋಸ್ಟ್ ಮಾಡಲು ಶುರು ಮಾಡಿದ್ದಾರೆ.
ಭಾರತದಲ್ಲಿ ಟ್ವಿಟರ್ ಟ್ರೆಂಡಿಂಗ್ ಟ್ವಿಟರ್ನಲ್ಲಿ#DhoniKeepTheGlove ಎನ್ನುವ ಹ್ಯಾಶ್ಟ್ಯಾಗ್ ಮೂಲಕ ಸಂಪೂರ್ಣ ದೇಶವೇ ನಿಮ್ಮ ಬೆನ್ನ ಹಿಂದಿಗಿದೆ ಎನ್ನುವ ನೈತಿಕ ಬಲವನ್ನು ನೆಟ್ಟಿಗರು ತೋರಿಸಿದ್ದಾರೆ. ಐಸಿಸಿಯ ಸೂಚನೆಗೆ ತಲೆಕೆಡಿಸಿಕೊಳ್ಳಬೇಕಿಲ್ಲ, ಮುಂದಿನ ಪಂದ್ಯದಲ್ಲೂ ಇದೇ ಗ್ಲೌಸ್ ತೊಟ್ಟು ಆಟವಾಡಿ ಎಂದು ಹಲವರು ಟ್ವೀಟ್ ಮಾಡಿ ಧೋನಿಗೆ ಬೆಂಬಲ ಸೂಚಿಸಿದ್ದಾರೆ.
ಧೋನಿ ಗ್ಲೌಸ್ನಿಂದ ಆ ಲಾಂಛನ ತೆಗೆದುಹಾಕಿ.. BCCIಗೆ ICC ತಾಕೀತು..
ಧೋನಿ ಬೆಂಬಲಿಸಿದ ಸಿನಿಮಾ ಮಂದಿ:
#DhoniKeepTheGlove ಹ್ಯಾಶ್ಟ್ಯಾಗ್ ಮೂಲಕ ಲಕ್ಷಾಂತರ ಮಂದಿ ಟ್ವೀಟ್ ಮಾಡುತ್ತಿದ್ದರೆ, ಸಿನಿ ಕಲಾವಿದರೂ ಸಹ ಧೋನಿಗೆ ತಮ್ ಬೆಂಬಲ ಸೂಚಿಸಿದ್ದಾರೆ. ಭಾರತೀಯ ಸೇನೆ ಎನ್ನುವುದು ಸ್ವತಂತ್ರ ಮತ್ತು ಯಾವುದೇ ಪಂಗಂಡಕ್ಕೆ ಸೇರಿಲ್ಲ. ಧೋನಿ ಧರಿಸಿರುವ ಗ್ಲೌಸ್ನಲ್ಲಿ ಯಾವುದೇ ತಪ್ಪಿಲ್ಲ ಎಂದು ಬಾಲಿವುಡ್ ನಟ ರಿತೇಶ್ ದೇಶಮುಖ್ ಟ್ವೀಟ್ ಮಾಡಿದ್ದಾರೆ.
ಐಸಿಸಿ ಧೋನಿ ಗ್ಲೌಸ್ ಬಗ್ಗೆ ಹೆಚ್ಚಿನ ತಲೆಕೆಡಿಸಿಕೊಳ್ಳುವ ಬದಲು ಸದ್ಯದ ಅಂಪೈರಿಂಗ್ ಬಗ್ಗೆ ಗಮನ ಹರಿಸಿದ್ದರೆ ಉತ್ತಮ ಎಂದು ತೆಲುಗು ನಟ ಸಾಯಿ ಧರಮ್ತೇಜ್ ಟ್ವೀಟ್ನಲ್ಲಿ ಐಸಿಸಿಗೆ ಟಾಂಗ್ ನೀಡಿದ್ದಾರೆ.
ವಿಶ್ವಕಪ್ನಿಂದ ಹಿಂದೆ ಸರಿಯಲೂ ಸಿದ್ಧ:
ಧೋನಿ ಧರಿಸಿದ್ದ ಗ್ಲೌಸ್ ಕುರಿತಾಗಿ ಐಸಿಸಿ ಒಂದು ವೇಳೆ ಖಡಕ್ ನಿರ್ಧಾರ ತೆಗೆದುಕೊಂಡರೆ ಟೀಮ್ ಇಂಡಿಯಾ ವಿಶ್ವಕಪ್ ಟೂರ್ನಿಯಿಂದ ಹಿಂದೆ ಸರಿಯಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರತೀಯ ಕ್ರಿಕೆಟ್ ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದಾರೆ.
ಲೆಫ್ಟಿನೆಂಟ್ ಕರ್ನಲ್ ಧೋನಿ:
ಟೀಮ್ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿಗೆ 2011ರಲ್ಲಿ ಪ್ಯಾರಾಚೂಟ್ ರೆಜಿಮೆಂಟ್ನಲ್ಲಿ ಲೆಫ್ಟಿನೆಂಟ್ ಕರ್ನಲ್ ಎನ್ನುವ ರ್‍ಯಾಂಕ್ ಗೌರವ ನೀಡಿ ಗೌರವಿಸಲಾಗಿದೆ. 2015ರಲ್ಲಿ ಈ ಕುರಿತಾಗಿ ಧೋನಿ ಪ್ರಾಥಮಿಕ ತರಬೇತಿಯನ್ನೂ ಪಡೆದಿದ್ದರು. ಹೀಗಾಗಿ ಧೋನಿ ಧರಿಸಿರುವ ಗ್ಲೌಸ್ ಯಾವುದೇ ನಿಯಮ ಉಲ್ಲಂಘನೆಯಲ್ಲ ಎನ್ನುವ ವಾದವೂ ಬಲವಾಗಿ ಕೇಳಿಬಂದಿದೆ.
ಲೆಫ್ಟಿನೆಂಟ್ ಕರ್ನಲ್ ರ್‍ಯಾಂಕ್ ಪಡೆಯುತ್ತಿರುವ ಧೋನಿ
ಐಸಿಸಿ ನಿಯಮ ಏನು ಹೇಳುತ್ತದೆ..?
ಐಸಿಸಿಯ ಉಡುಪು ಮತ್ತು ಸಲಕರಣೆ ನಿಯಮ ಜಿ1ರ ಅನ್ವಯ, "ಯಾವುದೇ ಆಟಗಾರ ಪಂದ್ಯದ ವೇಳೆ ಯಾವುದೇ ರೀತಿಯ ವೈಯಕ್ತಿಕ ಸಂದೇಶವನ್ನು ರವಾನಿಸುವಂತಹ ಬ್ಯಾಂಡ್ ಅಥವಾ ಧಿರಿಸನ್ನು ಧರಿಸುವಂತಿಲ್ಲ. ಉಭಯ ತಂಡಗಳ ಒಪ್ಪಿಗೆ ಅಥವಾ ಐಸಿಸಿಯ ಅನುಮತಿ ಇದ್ದಲ್ಲಿ ಮಾತ್ರವೇ ಧರಿಸುವ ಬಟ್ಟೆ ಅಥವಾ ಇನ್ನಿತರ ಸಲಕರಣೆಗಳನ್ನು ಆಟದ ವೇಳೆ ಬಳಸಬಹುದು. ಯಾವುದೇ ರೀತಿಯ ರಾಜಕೀಯ, ಧಾರ್ಮಿಕ, ಧರ್ಮದ ವಿಚಾರಕ್ಕೆ ಸಂಬಂಧಿಸಿದಂತ ಸಂದೇಶ ರವಾನಿಸುವ ಬಟ್ಟೆ ಧರಿಸಲು ಐಸಿಸಿ ಅನುಮತಿ ನೀಡುವುದಿಲ್ಲ."