ಮೈಸೂರು:ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಕ್ಸಿಜನೇಟೆಡ್ ಬೆಡ್ಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸುವ ಕೆಲಸ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಮಾಹಿತಿ ನೀಡಿದರು.
ಹೆಚ್.ಡಿ.ಕೋಟೆ ತಾಲೂಕಿನ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳು ಶೇ.50 ರಷ್ಟು ಬೆಡ್ಗಳನ್ನು ನೀಡಬೇಕು ಎಂದು ಈಗಾಗಲೇ ತಿಳಿಸಲಾಗಿದೆ. ಇದಕ್ಕಾಗಿ ನಿನ್ನೆ ಸುತ್ತೂರು ಸ್ವಾಮೀಜಿಗಳೊಂದಿಗೆ ಸಭೆ ನಡೆಸಲಾಗಿದ್ದು, ಅವರು ಸಹ 300 ಆಕ್ಸಿಜನೇಟೆಡ್ ಬೆಡ್ ಗಳನ್ನು ನೀಡಲು ಒಪ್ಪಿಗೆ ನೀಡಿದ್ದಾರೆ ಎಂದರು.
ಕೋವಿಡ್ 2ನೇ ಅಲೆಯು ಹೆಚ್ಚು ಅಪಾಯಕಾರಿಯಾದ್ದು, ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಸಾವು-ನೋವುಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ಇದಕ್ಕಾಗಿ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ಹೆಚ್.ಡಿ. ಕೋಟೆ ತಾಲೂಕಿನ ಪಿಡಿಒಗಳ ಮೇಲೆ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ವೈದ್ಯರಂತೆ ಇವರು ಪಿಪಿಪಿ ಕಿಟ್ ಧರಿಸಿ ಕೆಲಸ ಮಾಡುತ್ತಿಲ್ಲ. ಸರಿಯಾಗಿ ಅವರು ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕ ಅನಿಲ್ ಚಿಕ್ಕಮಾದು ಅವರು ಮಾತನಾಡಿ, ಇಲ್ಲಿನ ಆಸ್ಪತ್ರೆಗಳಲ್ಲಿ ನುರಿತವಾದ ಪಿಜಿಷಿಯನಿಷ್ಟ್ ಇಲ್ಲ. ಈ ಬಗ್ಗೆ ಕೆ.ಡಿ.ಪಿ ಸಭೆಯಲ್ಲೂ ಪ್ರಸ್ತಾಪಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಅವುಗಳಲ್ಲಿ ವೈದ್ಯರನ್ನು ನೇಮಿಸಿಲ್ಲ. ಪ್ರಸ್ತುತ 3 ಆ್ಯಂಬುಲೆನ್ಸ್ ಇದ್ದು, ಅವುಗಳು ದುರಸ್ತಿಯಲ್ಲಿದ್ದು, ಕೇವಲ ಒಂದು ಆ್ಯಂಬುಲೆನ್ಸ್ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಶೀಘ್ರವಾಗಿ ವೈದ್ಯರನ್ನು ಹಾಗೂ ನುರಿತ ಸಿಬ್ಬಂದಿಯನ್ನು ನೇಮಿಸಿಕೊಡಬೇಕೆಂದು ಮನವಿ ಸಲ್ಲಿಸಿದರು.