ಚಿತ್ರದುರ್ಗ: ಜಿಲ್ಲೆಯ ಮಿನಿ ಊಟಿ ಎಂದೇ ಖ್ಯಾತಿ ಗಳಿಸಿರುವ ಜೋಗಿಮಟ್ಟಿ ಅರಣ್ಯಧಾಮದ ಸುತ್ತಮುತ್ತ ಅಕ್ರಮ ಲೇಔಟ್ಗಳು ತಲೆ ಎತ್ತುತ್ತಿವೆ. ಇಲ್ಲಿ ನ್ಯಾಯಾಲಯದ ತೀರ್ಪು ಉಲ್ಲಂಘನೆ ಆಗುತ್ತಿದ್ದರೂ ಅಧಿಕಾರಿಗಳು ಮಾತ್ರ ನಮಗೇನೂ ಸಂಬಂಧವೇ ಇಲ್ಲ ಅನ್ನುವಂತೆ ವರ್ತಿಸುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.
ಚಿತ್ರದುರ್ಗ ನಗರಕ್ಕೆ ಹೊಂದಿಕೊಂಡಂತೆ ಇರುವ ಜೋಗಿಮಟ್ಟಿ ಒಂದು ಪ್ರವಾಸಿ ಸ್ಥಳ. 1905ರಲ್ಲೇ ಈ ಪ್ರದೇಶ ಸಂರಕ್ಷಿತ ಅರಣ್ಯ ಎಂದು ಘೋಷಿಸಲ್ಪಟ್ಟಿದ್ದು, 2015ರ ಡಿಸೆಂಬರ್ನಲ್ಲಿ ಪರಿಸರ ಪ್ರೇಮಿಗಳ ಹೋರಾಟದ ಫಲವಾಗಿ ಜೋಗಿಮಟ್ಟಿ ಅರಣ್ಯವನ್ನು ರಾಜ್ಯ ಸರ್ಕಾರ ವನ್ಯಜೀವಿ ಧಾಮವನ್ನಾಗಿ ಘೋಷಣೆ ಮಾಡಿದೆ. ಹೀಗಾಗಿ ಇತ್ತೀಚೆಗೆ ಸುಪ್ರೀಂ ಕೋರ್ಟ್ ರಾಷ್ಟ್ರೀಯ ಉದ್ಯಾನವನಗಳು ಹಾಗೂ ವನ್ಯಜೀವಿ ಧಾಮಗಳನ್ನ ಇಕೋ ಸೆನ್ಸಿಟಿವ್ ಝೋನ್ ಎಂದು ಗುರುತಿಸಿ, ಆ ಅರಣ್ಯ ವ್ಯಾಪ್ತಿಯ ಹತ್ತು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸರ್ಕಾರ ಹಾಗೂ ಖಾಸಗಿ ವ್ಯಕ್ತಿಗಳು ಗಣಿಗಾರಿಕೆ, ಕಾರ್ಖಾನೆ ಅಥವಾ ವಾಣಿಜ್ಯ ಕಟ್ಟಡ ನಿರ್ಮಾಣ ಸೇರಿದಂತೆ ಯಾವುದೇ ರೀತಿಯ ಅಭಿವೃದ್ಧಿ ಚಟುವಟಿಕೆ ನಡೆಸದಂತೆ ಆದೇಶಿಸಿ ತೀರ್ಪು ನೀಡಿದೆ.
ಅಕ್ರಮ ಲೇಔಟ್ ನಿರ್ಮಾಣ ವಿರುದ್ಧ ಹಲವರ ಆಕ್ರೋಶ ಈ ತೀರ್ಪು ಚಿತ್ರದುರ್ಗದ ಜೋಗಿಮಟ್ಟಿ ವನ್ಯಜೀವಿ ಧಾಮಕ್ಕೂ ಅನ್ವಯಿಸುತ್ತದೆ. ಆದ್ರೆ ಇಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ, ಜೋಗಿಮಟ್ಟಿ ಅರಣ್ಯಕ್ಕೆ ಹೊಂದಿಕೊಂಡಂತೆ ಇರುವ ಗುಡ್ಡಗಳನ್ನ ನೆಲಸಮ ಮಾಡಿ ಲೇಔಟ್ಗಳನ್ನ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಪರಿಸರಕ್ಕೆ ಮಾತ್ರವಲ್ಲದೇ, ಆಹಾರ ಅರಸಿ ಕಾಡಂಚಿಗೆ ಬರುವ ಪ್ರಾಣಿಗಳಿಂದ ಮನುಷ್ಯರಿಗೂ ಸಾಕಷ್ಟು ತೊಂದರೆಯಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ವಾಸ್ತವವಾಗಿ ಜೋಗಿಮಟ್ಟಿ ಅರಣ್ಯದಂಚಿನಲ್ಲಿ ಸಾಕಷ್ಟು ಗುಡ್ಡಗಾಡು ಪ್ರದೇಶವಿದೆ. ಆದರೆ ಆ ಜಾಗವನ್ನ 1962ರಲ್ಲೇ ಈ ಭಾಗದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಖಾಸಗಿಯವರಿಗೆ ಗ್ರ್ಯಾಂಟ್ ಮಾಡಿಕೊಟ್ಟಿದ್ದಾರೆ. ನಮಗೆ ತಿಳಿದಂತೆ ಗೋಡಂಬಿ ಬೆಳೆಯಲು ಅನುವು ಮಾಡಿಸಿಕೊಂಡ ಜಾಗವನ್ನ ಇದೀಗ ಲೇಔಟ್ ನಿರ್ಮಾಣ ಮಾಡಲು ಪರಿವರ್ತನೆ ಮಾಡಿಸಿಕೊಂಡಿದ್ದಾರೆ. ಪರಿವರ್ತನೆ ಸಮಯದಲ್ಲೂ ಸಹ ನಿಯಮಗಳ ಉಲ್ಲಂಘನೆ ಆಗಿದ್ದು, ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳನ್ನ ಕೇಳಿದ್ರೆ, ಅರಣ್ಯ ಇಲಾಖೆ ಅಧಿಕಾರಿಗಳು ಪರಿಸರ ಸೂಕ್ಷ್ಮ ವಲಯವನ್ನು ಗುರುತಿಸಿ ಮಾರ್ಕ್ ಮಾಡಿಲ್ಲ. ಹೀಗಾಗಿ ನಾವು ಅನುಮತಿ ನೀಡಿದ್ದೇವೆ ಅಂತಾರೆ. ಅರಣ್ಯ ಇಲಾಖೆ ಅಧಿಕಾರಿಗಳನ್ನ ಕೇಳಿದ್ರೆ, ಆ ಗುಡ್ಡಗಳು ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿದೆ. ಹೀಗಾಗಿ ಅವರ ಜಾಗದಲ್ಲಿ ನಾವು ಹಕ್ಕು ಚಲಾಯಿಸಲು ಬರುವುದಿಲ್ಲ ಎನ್ನುತ್ತಿದ್ದಾರೆ.
ಜೋಗಿಮಟ್ಟಿ ಅರಣ್ಯಧಾಮ ಹಾಗೂ ಸುತ್ತ ಮುತ್ತಲಿನ ಪ್ರದೇಶ ಇನ್ನು ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಕೇಳಿದ್ರೆ, ಅದು ತೀರ್ಪು ಬಂದ ನಂತರದಿಂದ ಚಾಲ್ತಿಗೆ ಬರುತ್ತೆ ಅಂತಾರೆ. ತೀರ್ಪಿನ ನಂತರದ ಅಭಿವೃದ್ಧಿ ಚಟುವಟಿಕೆಗಳನ್ನಾದರೂ ತಡೆಹಿಡಿಯಬಹುದಲ್ಲವೇ ಅಂದ್ರೆ, ಅದು ಹಾಗೆ ಮಾಡಲು ಬರುವುದಿಲ್ಲ ಎನ್ನುತ್ತಿದ್ದಾರಂತೆ.
ಒಟ್ಟಾರೆ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಚಿತ್ರದುರ್ಗದ ಜೋಗಿಮಟ್ಟಿ ವನ್ಯಜೀವಿ ಧಾಮದ ಹೆಸರು ಕೂಡ ಉಲ್ಲೇಖಿಸಲಾಗಿದೆ. ಅದರ ಪ್ರಕಾರ ಸೂಕ್ಷ್ಮ ಪರಿಸರ ವಲಯಕ್ಕೆ ಸೇರಿದ ಅರಣ್ಯದ ಸುತ್ತಮುತ್ತಲಿನ 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆಗಳಿಗೆ ಅವಕಾಶ ಇಲ್ಲ. ಆದ್ರೆ ಚಿತ್ರದುರ್ಗದಲ್ಲಿ ಮಾತ್ರ ನ್ಯಾಯಾಲಯದ ಆದೇಶಕ್ಕೆ ಕಿಮ್ಮತ್ತಿಲ್ಲ. ಪರಿಸ್ಥಿತಿ ಹೀಗೇ ಮುಂದುವರೆದರೆ ಜೋಗಿಮಟ್ಟಿ ವನ್ಯಜೀವಿ ಧಾಮ ಕೂಡ ನೆಲಸಮವಾಗಿ ಲೇಔಟ್ಗಳು ತಲೆ ಎತ್ತುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.