ಬೆಂಗಳೂರು: ಒಂದೇ ವರ್ಷದಲ್ಲಿ ಆಸ್ತಿ ದುಪ್ಪಟ್ಟು ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ನಾರಾಯಣಗೌಡನಿಗೆ ಎಸಿಬಿ ನೋಟಿಸ್ ನೀಡಿದೆ.
ಆಸ್ತಿ ದುಪ್ಪಟ್ಟು ಹೇಗಾಯಿತು. ಏನಾದರೂ ಆಡಿಟಿಂಗ್ನಲ್ಲಿ ಸಮಸ್ಯೆ ಆಗಿತ್ತೆ. ಅಕ್ರಮವಾಗಿ ಆಸ್ತಿ ಇಟ್ಟುಕೊಂಡಿದ್ದೀರಾ ಎಂಬೆಲ್ಲ ಪ್ರಶ್ನೆಗಳನ್ನು ಹೊಂದಿರುವ ನೋಟಿಸ್ಗೆ ಉತ್ತರಿಸುವಂತೆ ಎಸಿಬಿ ಸೂಚನೆ ನೀಡಿದೆ. ಅಲ್ಲದೆ ನಾರಾಯಣಗೌಡ, ಅವರ ಪತ್ನಿ ಹಾಗೂ ಪುತ್ರಿಗೂ ವಿಚಾರಣೆಗೆ ಹಾಜರಾಗಲು ತಾಕೀತು ಮಾಡಿದೆ.
ಏನಿದು ಪ್ರಕರಣ:
ಒಂದೇ ವರ್ಷದಲ್ಲಿ ಕೆ.ಆರ್.ಪೇಟೆ ಶಾಸಕ ನಾರಯಣಗೌಡ ಅವರ ಆಸ್ತಿಯಲ್ಲಿ ಕೋಟಿ ಕೋಟಿ ಏರಿಕೆ ಕಂಡಿತ್ತು. ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಅವರು ದಾಖಲೆ ಸಮೇತ ಎಸಿಬಿಗೆ ದೂರು ನೀಡಿದ್ದರು.
ದೂರಿನಲ್ಲಿ ಏನಿದೆ..?
ಚುನಾವಣಾ ಆಯೋಗಕ್ಕೆ ನೀಡಿದ್ದ ಪ್ರಮಾಣಪತ್ರದಲ್ಲಿ ಶಾಸಕರ ಆಸ್ತಿ ಏರಿಕೆಯಾಗಿದೆ. 2016-17ರಲ್ಲಿ 24 ಲಕ್ಷ ಇದ್ದ ಆದಾಯ 2018ಕ್ಕೆ ಇದ್ದಕ್ಕಿದ್ದಂತೆ 5.89 ಕೋಟಿಗೆ ಏರಿಕೆಯಾಗಿದೆ. 2017 ರಿಂದ 2018ರಲ್ಲಿ ಸಾವಿರಾರು ಪಟ್ಟು ಆಸ್ತಿ ಹೆಚ್ಚಳ ಹೇಗಾಯಿತು. ಆದಾಯ ತೆರಿಗೆ ಇಲಾಖೆಗೆ ನೀಡಿದ್ದ ದಾಖಲೆ ಹಾಗೂ ಅಫಿಡವಿಟ್ ನಕಲಿಯಾಗಿವೆ.
ಕೇವಲ ಶಾಸಕ ನಾರಾಯಣಗೌಡ ಆಸ್ತಿ ಮಾತ್ರವಲ್ಲದೆ ಪತ್ನಿ ದೇವಿಕಾ ನಾರಾಯಣಗೌಡ ಅವರ ಹೆಸರಿನಲ್ಲಿನ ಆಸ್ತಿ 2017ರಲ್ಲಿ 5 ಲಕ್ಷ, 2018ರಲ್ಲಿ 2.95 ಕೋಟಿಗೆ ಏರಿಕೆಯಾಗಿದೆ. ನಾರಯಣಗೌಡ ಪುತ್ರಿಯರಾದ ಲೀಲಾ ಹಾಗೂ ನೇಹಾ ಆಸ್ತಿಯಲ್ಲಿ ಹತ್ತಾರು ಪಟ್ಟು ಹೆಚ್ಚಳ ಆಗಿದೆ. ಅಕ್ರಮವಾಗಿ ಆಸ್ತಿ ಸಂಪಾದನೆ ಹಾಗೂ ಆಸ್ತಿ ಮುಚ್ಚಿಟ್ಟ ಆರೋಪ ಮಾಡಿ ಟಿ.ಜೆ.ಅಬ್ರಹಾಂ ದೂರು ನೀಡಿದ್ದರು.