ಬೆಂಗಳೂರು:ಗ್ರಾಮೀಣ ಪ್ರದೇಶಗಳಲ್ಲಿ ಮನೆ ಆರೈಕೆ ವ್ಯವಸ್ಥೆ ಇಲ್ಲದಿದ್ದರೆ, ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಿಸಲಾಗುತ್ತದೆ. ಸ್ಥಳೀಯ ಮಟ್ಟದ ಟಾಸ್ಕ್ ಫೋರ್ಸ್ ಈ ಕಾರ್ಯನಿರ್ವಹಿಸಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ, ಬೂತ್ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಯಲ್ಲಿ ಸ್ಥಳೀಯರು, ಸಂಘಟನೆ, ಮುಖಂಡರಿದ್ದು, ಕೋವಿಡ್ ನಿರ್ವಹಣೆ ಮಾಡುತ್ತಾರೆ. ರೋಗಿಗೆ ಮನೆ ಆರೈಕೆ ಸೌಲಭ್ಯಗಳಿಲ್ಲದಿದ್ದರೆ ಕೋವಿಡ್ ಕೇರ್ ಸೆಂಟರ್ಗೆ ದಾಖಲಿಸಲಾಗುತ್ತದೆ ಎಂದು ತಿಳಿಸಿದರು.
2 ಕೋಟಿ ಕೋವಿಶೀಲ್ಡ್ ಲಸಿಕೆ ಖರೀದಿಸಲು ಸೀರಂ ಸಂಸ್ಥೆಗೆ ಆರ್ಡರ್ ನೀಡಲಾಗಿದೆ. ಈ ಪೈಕಿ 2 ಲಕ್ಷ ಡೋಸ್ ರಾಜ್ಯಕ್ಕೆ ಬಂದಿದೆ. 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ಹಾಗೂ ಮೊದಲ ಡೋಸ್ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ಈವರೆಗೆ 1,11,26,340 ಡೋಸ್ ಲಸಿಕೆ ನೀಡಿದೆ. ರಾಜ್ಯ ಸರ್ಕಾರದಿಂದ ನೇರವಾಗಿ 9.50 ಲಕ್ಷ ಡೋಸ್ ಕೋವಿಶೀಲ್ಡ್, 1,44,170 ಕೋವ್ಯಾಕ್ಸಿನ್ ಖರೀದಿ ಸೇರಿ ಒಟ್ಟು 1,22,20,510 ಡೋಸ್ ಲಸಿಕೆ ರಾಜ್ಯಕ್ಕೆ ದೊರೆತಿದೆ. ಈವರೆಗೆ 1,13,61,234 ಜನರಿಗೆ ಲಸಿಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.