ಲಂಡನ್:ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ ಮಹಾಟೂರ್ನಿ ಇಂದಿನಿಂದ ಆರಂಭಗೊಳ್ಳುತ್ತಿದ್ದು, ಉದ್ಘಾಟನಾ ಪಂದ್ಯದಲ್ಲೇ ಆತಿಥೇಯ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡ ಮುಖಾಮುಖಿಯಾಗುತ್ತಿವೆ.
ಕಳೆದ ಒಂದು ವರ್ಷದ ಇತಿಹಾಸ ನೋಡಿದಾಗ ಇಂಗ್ಲೆಂಡ್ ಆಡಿರುವ 25 ಪಂದ್ಯಗಳಲ್ಲಿ 17ರಲ್ಲಿ ಗೆಲುವು ದಾಖಲಿಸಿದ್ದು, ಕೇವಲ 5 ಪಂದ್ಯಗಳನ್ನು ಕೈಚೆಲ್ಲಿದೆ. ಮೂರು ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ಹೊರಬಿದ್ದಿಲ್ಲ. ಇನ್ನು ಇಂದು ಪಂದ್ಯ ನಡೆಯುತ್ತಿರುವ ಮೈದಾನದಲ್ಲೇ ಇಂಗ್ಲೆಂಡ್ 13 ಪಂದ್ಯಗಳನ್ನಾಡಿದ್ದು, 11 ಪಂದ್ಯದಲ್ಲಿ ಜಯಶಾಲಿ ಆಗಿದ್ದು, ಒಂದು ಒಂದು ಪಂದ್ಯ ಮಾತ್ರ ಸೋತಿದೆ. ಮತ್ತೊಂದು ಪಂದ್ಯದಿಂದ ಫಲಿತಾಂಶ ಬಂದಿಲ್ಲ.
ಕಳೆದ ಒಂದು ವರ್ಷದಲ್ಲಿ ದಕ್ಷಿಣ ಆಫ್ರಿಕಾ ಕೂಡ ಏಕದಿನ ಪಂದ್ಯಗಳಲ್ಲಿ ಉತ್ತಮ ರೆಕಾರ್ಡ್ ಹೊಂದಿದ್ದು, ಆಡಿರುವ 21 ಏಕದಿನ ಪಂದ್ಯಗಳಲ್ಲಿ 16ರಲ್ಲಿ ಗೆಲುವು ಪಡೆದಿದ್ದು, 5ರಲ್ಲಿ ಸೋತಿದೆ. ಇನ್ನು ವಿದೇಶಿ ನೆಲದಲ್ಲೂ ಆಫ್ರಿಕಾ ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದು, 8 ಪಂದ್ಯಗಳ ಪೈಕಿ 5ರಲ್ಲಿ ಗೆದ್ದಿದೆ. ಆದರೆ ಇಂದು ಪಂದ್ಯ ನಡೆಯುತ್ತಿರುವ ಮೈದಾನದಲ್ಲಿ ಹರಿಣಗಳ ತಂಡ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ.