ಲಂಡನ್: 12ನೇ ಅವೃತ್ತಿಯ ಐಸಿಸಿ ವಿಶ್ವಕಪ್ನಲ್ಲಿ ಇಂಗ್ಲೆಂಡ್ ತಂಡ ನಾಲ್ವರ ಅರ್ಧಶತಕದ ನೆರವಿನಿಂದ 311 ರನ್ಗಳ ಬೃಹತ್ ಮೊತ್ತದ ಕಲೆಹಾಕಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ಮೊದಲ ಓವರ್ನಲ್ಲೇ ಸ್ಫೋಟಕ ಆಟಗಾರ ಬೈರ್ಸ್ಟೋವ್ ವಿಕೆಟ್ ಕಳೆದುಕೊಂಡಿತು. ಆದರೆ ಜಾಸನ್ ರಾಯ್(54) ಮತ್ತು ಜೋರೂಟ್ 2ನೇ ವಿಕೆಟ್ ಜೊತೆಯಾಟದಲ್ಲಿ 106 ರನ್ ಸೇರಿಸಿದರು. ಉತ್ತಮವಾಗಿ ಆಡುತ್ತಿದ್ದ ರಾಯ್ ವಿಕೆಟ್ ಪಡೆದು ಪೆಹ್ಲುಕ್ವಾಯೋ ಆಫ್ರಿಕಾ ತಂಡಕ್ಕೆ ಬ್ರೇಕ್ ನೀಡಿದರು. ನಂತರದ ಓವರ್ನಲ್ಲಿ ರಬಡಾ ರೂಟ್ ವಿಕೆಟ್ ಪಡೆದು ಇಂಗ್ಲೆಂಡ್ಗೆ ಆಘಾತ ನೀಡಿದರು.
ಈ ಹಂತದಲ್ಲಿ ಒಂದಾದ ನಾಯಕ ಮಾರ್ಗನ್ ಹಾಗೂ ಬೆನ್ಸ್ಟೋಕ್ಸ್ 4ನೇ ವಿಕೆಟ್ ಜೊತೆಯಾಟದಲ್ಲಿ 106 ರನ್ ಸೇರಿಸಿ ಮತ್ತೆ ತಂಡವನ್ನು ಮೇಲಿತ್ತಿದ್ದಲ್ಲದೆ, ಬೃಹತ್ ಮೊತ್ತ ಕೊಂಡೊಯ್ಯುತ್ತಿದ್ದರು. ಆದರೆ ತಮ್ಮ ಎರಡನೇ ಸ್ಪೆಲ್ ಎಸೆಯಲು ಬಂದ ತಾಹೀರ್ ಮಾರ್ಗನ್ರನ್ನು ಪೆವಿಲಿಯನ್ಗಟ್ಟಲು ಯಶಸ್ವಿಯಾದರು. ಮಾರ್ಗನ್ 60 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 4 ಬೌಂಡರಿ ನೆರವಿನಿಂದ 57ರನ್ಗಳಿಸಿದರು. ನಂತರ ಬಂದ ಬಟ್ಲರ್(18) ಕೂಡ ಎಂಗಿಡಿ ಬೌಲಿಂಗ್ನಲ್ಲಿ ಬೌಲ್ಡ್ ಆಗಿ ಇಂಗ್ಲೆಂಡ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.
ಆದರೆ 20ನೇ ಓವರ್ನಲ್ಲಿ ಬ್ಯಾಟಿಂಗ್ ಇಳಿದಿದ್ದ ಬೆನ್ಸ್ಟೋಕ್ಸ್ 49 ನೇ ಓವರ್ತನಕ ಬ್ಯಾಟಿಂಗ್ ನಡೆಸಿ 89 ರನ್ ಕಲೆಹಾಕಿದರು. ಇವರ ಇನ್ನಿಂಗ್ಸ್ನಲ್ಲಿ 9 ಬೌಂಡರಿ ಒಳಗೊಂಡಿತ್ತು. ಒಟ್ಟಾರೆ 50 ಓವರ್ಗಳ ಕೋಟಾದಲ್ಲಿ ಇಂಗ್ಲೆಂಡ್ 8 ವಿಕೆಟ್ ಕಳೆದುಕೊಂಡು 311 ರನ್ಗಳಿಸಿತು.
ದ.ಆಫ್ರಿಕಾ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ತಾಹೀರ್ 61 ರನ್ ನೀಡಿ 2 ವಿಕೆಟ್, ಲುಂಗಿ ಎಂಗಿಡಿ 66ಕ್ಕೆ 3, ಕಗಿಸೋ ರಬಾಡಾ 66ಕ್ಕೆ 2 ಹಾಗೂ ಪೆಹ್ಲುಕ್ವಾಯೋ 44 ರನ್ ನೀಡಿ ಒಂದು ವಿಕೆಟ್ ಪಡೆದರು.