ಸೌತಮ್ಟನ್: ಐಸಿಸಿ ವಿಶ್ವಕಪ್ನ 15 ನೇ ಪಂದ್ಯ ಮಳೆಗೆ ರದ್ದಾದ ಕಾರಣ ವಿಂಡೀಸ್ ಹಾಗೂ ದ.ಆಫ್ರಿಕಾ ತಂಡಗಳು ತಲಾ ಒಂದು ಅಂಕ ಹಂಚಿಕೊಂಡಿವೆ.
ಟಾಸ್ ಗೆದ್ದ ವಿಂಡೀಸ್ ದ.ಆಫ್ರಿಕಾ ತಂಡವನ್ನು ಬ್ಯಾಟಿಂಗ್ ಇಳಿಸಿದ್ದಲ್ಲದೆ 7.3 ಓವರ್ಗಳಲ್ಲಿ ತಂಡದ ಆರಂಭಿಕ ಆಟಗಾರ ಹಾಶಿಮ್ ಆಮ್ಲ(6) ಹಾಗೂ ಐಡನ್ ಮ್ಯಾಕ್ರಮ್(5) ವಿಕೆಟ್ ಪಡೆದು ಉತ್ತಮ ಸ್ಥಿತಿಯಲ್ಲಿತ್ತು. ಆದರ ಈ ವೇಳೆ ಆರಂಭವಾದ ಮಳೆ ದಿನಪೂರ್ತಿ ನಿಲ್ಲದೆ ಸುರಿದಿದ್ದರಿಂದ ಪಂದ್ಯವನ್ನು ರದ್ದುಗೊಳಿಸಲಾಯಿತು.
ಮೊದಲ ಮೂರು ಪಂದ್ಯಗಳಲ್ಲಿ ಸೋಲನುಭವಿಸಿದ್ದ ದ.ಆಫ್ರಿಕಾ ತಂಡ ಈ ಪಂದ್ಯ ರದ್ದಾಗಿದ್ದರಿಂದ ಒಂದು ಅಂಕ ಪಡೆದು ಅಂಕಪಟ್ಟಿಯಲ್ಲಿ ತನ್ನ ಖಾತೆ ತೆರೆಯಿತು. ತಲಾ ಒಂದು ಸೋಲು ಹಾಗೂ ಗೆಲುವು ಪಡೆದಿದ್ದ ವಿಂಡೀಸ್ ಈ ಪಂದ್ಯದ ಒಂದು ಅಂಕ ಗಿಟ್ಟಿಸಿಕೊಂಡು ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿತು.
ಮುಂದಿನ ಪಂದ್ಯದಲ್ಲಿ ದ.ಆಫ್ರಿಕಾ ಅಫ್ಘಾನಿಸ್ತಾದ ವಿರುದ್ಧ ಹಾಗೂ ವಿಂಡೀಸ್ ಇಂಗ್ಲೆಂಡ್ ವಿರುದ್ಧ ಸೆಣಸಾಡಲಿವೆ. ನಾಳೆ ನಡೆಯುವ 16ನೇ ಪಂದ್ಯದಲ್ಲಿ ಬಾಂಗ್ಲಾದೇಶ ಶ್ರೀಲಂಕಾವನ್ನು ಎದುರಿಸಲಿದೆ.