ಉಡುಪಿ:ಜನರ ಬೇಡಿಕೆ ಒತ್ತಾಯದ ಮೇರೆಗೆ ಪರಿಷ್ಕೃತ ಆದೇಶ ಹೊರಡಿಸಿದ್ದೇವೆ. ದಿನಸಿ, ತರಕಾರಿ ಮಾರಾಟಕ್ಕೆ ಹೆಚ್ಚುವರಿ ಸಮಯ ನಿಗದಿ ಮಾಡಿದ್ದೇವೆ ಎಂದು ಸರ್ಕಾರದ ಆದೇಶವನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಮರ್ಥಿಸಿಕೊಂಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಈವರೆಗೆ ತರಕಾರಿ ದಿನಸಿ ಖರೀದಿಗೆ ಸಮಯ ಸಾಲುತ್ತಿರಲಿಲ್ಲ. ಸೀಮಿತ ಸಮಯಾವಕಾಶ ಜನಸಂದಣಿ ಹೆಚ್ಚಾಗಲು ಕಾರಣವಾಯಿತು. ಜನಸಂದಣಿ ತಪ್ಪಿಸಬೇಕು ಅನ್ನೋದು ನಮ್ಮ ಉದ್ದೇಶ, ಜನ ಸೇರುವುದನ್ನು ಕಡಿಮೆ ಮಾಡಲು ಈ ತೀರ್ಮಾನ ಕೈಗೊಂಡಿದ್ದೇವೆ ಎಂದರು.
ಇದೇ ವೇಳೆ ರೆಮ್ಡಿಸಿವರ್ ಕಾಳಸಂತೆಯಲ್ಲಿ ಮಾರಾಟ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ಹೆಚ್ಚಿನ ರೀತಿಯಲ್ಲಿ ನಿಗಾವಹಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.
ಜನರ ಬೇಡಿಕೆ ಮೇರೆಗೆ ಕರ್ಫ್ಯೂ ಸಮಯ ವಿಸ್ತರಿಸಿದ್ದೇವೆ.. ಗೃಹ ಸಚಿವ ಬೊಮ್ಮಾಯಿ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಟೆಸ್ಟ್ ಮಾಡುವ ಮತ್ತೊಂದು ಲ್ಯಾಬ್ ಆರಂಭಿಸೋದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಉಡುಪಿಯಲ್ಲಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಉಡುಪಿಯಲ್ಲಿ ಪ್ರತಿದಿನ 600ಕ್ಕೂ ಅಧಿಕ ಪಾಸಿಟಿವ್ ಕೇಸ್ ಬರುತ್ತಿವೆ. ಹಾಗಾಗಿ ಲ್ಯಾಬ್ಗೆ ಒತ್ತಡ ಹೆಚ್ಚುವ ಸಾಧ್ಯತೆ ಇದೆ. ಜಿಲ್ಲೆಗೆ ಸರ್ಕಾರದ ಏಕೈಕ ಲ್ಯಾಬ್ ಇರೋದರಿಂದ ಸದ್ಯ ಪೂಲಿಂಗ್ ಮಾಡಿಕೊಂಡು ಪ್ರತೀದಿನ 3000 ಟೆಸ್ಟ್ ಮಾಡಿಸುತ್ತಿದ್ದೇವೆ. ಇನ್ಮುಂದೆ ಒಂದೂವರೆ ಸಾವಿರ ಹೆಚ್ಚುವರಿ ಟೆಸ್ಟ್ ಮಾಡಿಸುವ ಇರಾದೆ ಇದೆ. ಇದಕ್ಕಾಗಿ ಸೂಕ್ತ ಲ್ಯಾಬ್ ವ್ಯವಸ್ಥೆ ಮಾಡಲಾಗುವುದು. ಸ್ವತಂತ್ರವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ 3000 ಟೆಸ್ಟ್ ಮಾಡಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಉಡುಪಿಯಲ್ಲಿ ಸದ್ಯ ಬೆಡ್ ಕೊರತೆಯಿಲ್ಲ. ಆರ್ಟಿ-ಪಿಸಿಆರ್ ನೆಗೆಟಿವ್ ಬಂದರೂ ಕೂಡ ಉಸಿರಾಟದ ತೊಂದರೆ ಕಂಡುಬರುತ್ತಿದೆ. ಹಾಗಾಗಿ ಬರುವಂತಹ ದಿನಗಳಲ್ಲಿ ಕೋವಿಡ್ ಮತ್ತು ಸಾರಿ(SARI)ಕೇಸ್ ಹೆಚ್ಚಾಗುವ ಸಾಧ್ಯತೆ ಇದೆ. ಇದರ ನಿರ್ವಹಣೆಗೆ ಜಿಲ್ಲಾಸ್ಪತ್ರೆಯಲ್ಲಿ ಸುಮಾರು 25 ಆಕ್ಸಿಜನ್ ಬೆಡ್ಗಳನ್ನು ಹೆಚ್ಚಿಸುತ್ತೇವೆ. ಕೋವಿಡ್ ಮತ್ತು ಸಾರಿ ಕೇಸುಗಳಿಗೆ ಪ್ರತ್ಯೇಕ ಬೆಡ್ ಮೀಸಲಿರಿಸುತ್ತೇವೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:ರಾಜ್ಯದಲ್ಲಿ ಕರ್ಫ್ಯೂ ಇದ್ದರೂ, ಸೋಂಕಿತರ ಸಂಖ್ಯೆ ಡಬಲ್ .. ತಜ್ಞರು ಏನಂತಾರೆ?