ಬೆಂಗಳೂರು: ನಗರದಲ್ಲಿ ಎರಡನೇ ಅಲೆಯ ಸಂದರ್ಭದಲ್ಲಿ ಮನೆಗಳಲ್ಲಿ ಸಾವನ್ನಪ್ಪಿರುವವರ ಅಂಕಿ-ಸಂಖ್ಯೆ ಬೆಚ್ಚಿಬೀಳಿಸುವಂತಿದೆ. ಆರೋಗ್ಯ ಇಲಾಖೆಯೇ ನೀಡಿರುವ ಅಂಕಿ ಅಂಶಗಳ ಪ್ರಕಾರ ಮೇ 21ರವರೆಗೆ 778 ಮಂದಿ ಹೋಂ ಐಸೋಲೇಷನ್ನಲ್ಲಿರುವವರು ಸಾವನ್ನಪ್ಪಿದ್ದರು. ಜೂನ್ 2ರವರೆಗೆ ಈ ಸಾವಿನ ಪ್ರಮಾಣ 1,599ಕ್ಕೆ ಏರಿಕೆಯಾಗಿದೆ.
ಸರ್ಕಾರದ ಅಂಕಿ-ಅಂಶಗಳಿಗೆ ಸಿಗದೇ ಒಂದೂವರೇ ಪಟ್ಟು ಹೆಚ್ಚು ಜನ ಸಾವನ್ನಪ್ಪಿರುವ ಸಾಧ್ಯತೆಗಳಿವೆ. ಅನೇಕ ಜನರು ಟೆಸ್ಟ್ ಮಾಡಿಸದೇ, ಏಕಾಏಕಿ ಆರೋಗ್ಯ ಪರಿಸ್ಥಿತಿ ಹದಗೆಟ್ಟು, ಅಥವಾ ಆಸ್ಪತ್ರೆಗೆ ಕರೆತರುವ ದಾರಿಯಲ್ಲೇ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಹೋಂ ಐಸೋಲೇಷನ್ನಲ್ಲಿರುವವರ ಹಠಾತ್ ಸಾವಿಗೆ ಕಾರಣ ಸರಿಯಾದ ವೈದ್ಯಕೀಯ ಸಲಹೆ, ಔಷಧಿ ಸಿಗದಿರುವುದು ಕೂಡಾ ಆಗಿದೆ. ಹಳೆಯ ಸಾವಿನ ಪ್ರಕರಣಗಳನ್ನು ಕೂಡಾ ಮೇ ತಿಂಗಳಲ್ಲಿ ಒಟ್ಟಿಗೆ ನಮೂದಿಸಿರುವ ಕಾರಣದಿಂದಲೂ ಸಂಖ್ಯೆ ಹೆಚ್ಚು ಕಾಣಲು ಕಾರಣವಾಗಿದೆ ಎನ್ನಲಾಗ್ತಿದೆ.
ನಗರದಲ್ಲಿ1,17,340 ಸಕ್ರಿಯ ಪ್ರಕರಣಗಳಿದ್ದು, 3,400 ಮಂದಿ ಮಾತ್ರ ಆಸ್ಪತ್ರೆಗಳಲ್ಲಿ ದಾಖಲಾಗಿದ್ದು, ಉಳಿದ 1,13,940 ಜನರು ಕೂಡಾ ಹೋಂ ಐಸೋಲೇಷನ್ನಲ್ಲಿದ್ದಾರೆ. ಹೋಂ ಐಸೋಲೇಷನ್ನಲ್ಲಿರುವವರು 10 ರಿಂದ 14 ದಿನಗಳು ಪೂರೈಸಿದ ಬಳಿಕ ಅವರನ್ನು ಡಿಸ್ಚಾರ್ಜ್ ಎಂದು ಪರಿಗಣಿಸಿ, ಸಕ್ರಿಯ ಪ್ರಕರಣಗಳನ್ನು ಕಡಿಮೆ ಮಾಡಲಾಗುತ್ತಿದೆ. ಆದರೆ ಹೋಂ ಐಸೋಲೇಷನ್ನಲ್ಲಿರುವವರ ಆರೋಗ್ಯದ ಮೇಲೆ ನಿಗಾ ಇಡಲು ಪಾಲಿಕೆಗೆ, ಆರೋಗ್ಯ ಇಲಾಖೆಗೆ ಸಿಬ್ಬಂದಿ ಕೊರತೆ ಉಂಟಾಗಿದೆ.
ಬಿಬಿಎಂಪಿ ಮುಖ್ಯ ಆಯುಕ್ತರಾದ ಗೌರವ್ ಗುಪ್ತಾ ಸಾವಿನ ಪ್ರಮಾಣದಲ್ಲಿ ಕಡಿಮೆಯಾಗಿಲ್ಲ!ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 2 ಸಾವಿರಕ್ಕೆ ಇಳಿಕೆಯಾಗಿದ್ದರೂ, ಸಾವಿನ ಪ್ರಕರಣಗಳು ಮಾತ್ರ ಪ್ರತಿನಿತ್ಯ 200 ಕ್ಕೂ ಮೀರಿ ಬರುತ್ತಿದೆ. ಇದಕ್ಕೆ ಸ್ಪಷ್ಟನೆ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತರಾದ ಗೌರವ್ ಗುಪ್ತಾ, ರಾಜ್ಯದ ಹೆಲ್ತ್ ಬುಲೆಟಿನ್ನಲ್ಲಿ 15-20 ದಿನಗಳ ಹಿಂದಿನ ಸಾವಿನ ಅಂಕಿ ಸಂಖ್ಯೆಗಳನ್ನು ಈಗ ಪ್ರಕಟಿಸಲಾಗುತ್ತಿದೆ. ಹೀಗಾಗಿ ಈಗ ಸಾವಿನ ಪ್ರಮಾಣದಲ್ಲಿ ಏರಿಕೆ ಕಂಡುಬರುತ್ತಿದೆ. ಆದರೆ ಇವುಗಳು ಸದ್ಯ ಆಗುತ್ತಿರುವ ಕೋವಿಡ್ ಮರಣಗಳು ಅಲ್ಲ ಎಂದರು.
ಸದ್ಯ ನಗರದ ಚಿತಾಗಾರ, ರುದ್ರಭೂಮಿಗಳಿಗೆ ಕಡಿಮೆ ಕೋವಿಡ್ ಮೃತದೇಹಗಳು ಹೋಗುತ್ತಿವೆ. ಇತರೆ ಸಮಯದಲ್ಲೂ 80 ಸಾವುಗಳು ಸಂಭವಿಸಿದ್ದವು. ಕೋವಿಡ್ ಹಾಗೂ ನಾನ್ ಕೋವಿಡ್ ಮೃತದೇಹಗಳು ಸೇರಿ ಒಟ್ಟು 120 ಸಾವುಗಳು ಸಂಭವಿಸುತ್ತಿವೆ ಎಂದು ಮುಖ್ಯ ಆಯುಕ್ತರು ತಿಳಿಸಿದರು.
ಐಸಿಯು ಬೆಡ್ಗಾಗಿ ಕ್ಯೂ:ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದರೂ, ಐಸಿಯು, ವೆಂಟಿಲೇಟರ್ ಬೆಡ್ಗಳ ಬೇಡಿಕೆ ಕಡಿಮೆಯಾಗಿಲ್ಲ. ಜೊತೆಗೆ ಐಸಿಯು ಬೆಡ್ಗಾಗಿ ನಾಗರಿಕರು ಸಹಾಯವಾಣಿಗೆ ಕರೆ ಮಾಡಿದ್ರೂ, 6 ರಿಂದ 16 ಗಂಟೆಗಳವರೆಗೆ ಕ್ಯೂ ನಲ್ಲಿ ಕಾಯಬೇಕಾಗುತ್ತದೆ. ಆದರೆ ಆಮ್ಲಜನಕದ ತೀವ್ರ ಅಗತ್ಯ ಬಿದ್ದವರಿಗೆ ಹೆಚ್ಡಿಯು ಬೆಡ್ ಮೂಲಕ ಆಕ್ಸಿಜನ್ ಪೂರೈಸಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳು ಶೇ. 50 ರಷ್ಟು ಹಾಸಿಗೆಯನ್ನು ಸದ್ಯ ಸರ್ಕಾರಿ ಕೋಟಾಕ್ಕೆ ಬಿಟ್ಟುಕೊಟ್ಟಿದ್ದು, ಇದರ ಪ್ರಮಾಣ ಇಳಿಸುವ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದು ಮುಖ್ಯ ಆಯುಕ್ತರು ಮಾಹಿತಿ ನೀಡಿದರು.