ಬೆಂಗಳೂರು: ಕೋವಿಡ್ ನಿಯಂತ್ರಣಕ್ಕಾಗಿ ಜಾರಿ ಮಾಡಿರುವ ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸಿ ರಸ್ತೆಗಿಳಿದು ಜಪ್ತಿಯಾಗಿರುವ ವಾಹನಗಳನ್ನು ದಂಡ ವಿಧಿಸಿ ಬಿಡುಗಡೆ ಮಾಡಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಅನುಮತಿಸಿದೆ.
ಕೋವಿಡ್ ನಿರ್ವಹಣೆ ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ಈ ಮೊದಲೇ ಸಲ್ಲಿಸಿದ್ದ ಮಧ್ಯಂತರ ಅರ್ಜಿ ಕುರಿತು ಪ್ರಸ್ತಾಪಿಸಿದ ಸರ್ಕಾರದ ಪರ ವಕೀಲರು, ಲಾಕ್ಡೌನ್ ಉಲ್ಲಂಘಿಸಿದ ಆರೋಪದಡಿ ದ್ವಿಚಕ್ರ, ತ್ರಿಚಕ್ರ ಮತ್ತು ನಾಲ್ಕು ಚಕ್ರ ವಾಹನ ಸೇರಿದಂತೆ ಒಂದೂವರೆ ಲಕ್ಷಕ್ಕೂ ಹೆಚ್ಚು ವಾಹನಗಳನ್ನು ಜಪ್ತಿ ಮಾಡಲಾಗಿದೆ. ಈ ಎಲ್ಲಾ ವಾಹನಗಳ ಬಿಡುಗಡೆ ಕೋರಿ ಮಾಲಿಕರು ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಸೇರಿದರೆ ಜನಜಂಗುಳಿ ಸೃಷ್ಟಿಯಾಗುತ್ತದೆ. ಹಾಗೆಯೇ ಬೃಹತ್ ಸಂಖ್ಯೆಯ ವಾಹನಗಳನ್ನು ನಿಲುಗಡೆ ಮಾಡಲು ಸ್ಥಳಾವಕಾಶದ ಕೊರತೆಯೂ ಎದುರಾಗಿದೆ. ಆದ್ದರಿಂದ, ದಂಡ ಪಾವತಿಸಿಕೊಂಡು ವಾಹನಗಳನ್ನು ಬಿಡುಗಡೆ ಮಾಡಲು ಅನುಮತಿ ನೀಡಬೇಕು ಎಂದು ಕೋರಿದರು.
ಈ ಹಿಂದೆ ಪೊಲೀಸರು ವಶಪಡಿಸಿಕೊಂಡಿದ್ದ ವಾಹನಗಳ ಬಿಡುಗಡೆಗೆ 2020ರ ಏ.30ರಂದು ಹೈಕೋರ್ಟ್ ಆದೇಶಿಸಿತ್ತು. ಆ ಆದೇಶವನ್ನು ವಿಸ್ತರಿಸಬೇಕು ಎಂದು ಕೋರಿದರು. ಮನವಿ ಪುರಸ್ಕರಿಸಿದ ಪೀಠ, ದಂಡ ಪಾವತಿಸಿಕೊಂಡು ವಾಹನ ಬಿಡುಗಡೆ ಮಾಡಲು ಅನುಮತಿ ನೀಡಿ ಆದೇಶಿಸಿತು.