ಆನೇಕಲ್: ಇಬ್ಬರು ಕಳ್ಳರಿಂದಾಗಿ ಇಡೀ ಠಾಣೆಯಲ್ಲಿನ ಸಿಬ್ಬಂದಿ ಆತಂಕದಲ್ಲಿದ್ದರು. ನಂತರ ಓರ್ವ ಎಎಸ್ಐಗೂ ಕೊರೊನಾ ಪಾಸಿಟಿವ್ ಬಂದ ಮೇಲೆ ಠಾಣೆಯನ್ನೇ ಸೀಲ್ ಡೌನ್ ಮಾಡಲಾಗಿತ್ತು. ಆದರೆ ಈಗ ಕೊರೊನಾವನ್ನೇ ಮೆಟ್ಟಿ ನಿಂತು ಹೆಬ್ಬಗೋಡಿ ಪೊಲೀಸ್ ಠಾಣೆ ರಾಜ್ಯಕ್ಕೆ ಮಾದರಿಯಾಗಿದೆ.
ತಾಲೂಕಿನ ಹೆಬ್ಬಗೋಡಿ ಠಾಣೆ ಅಂದ್ರೆ ಸಾಕು ಕೆಲ ದಿನಗಳ ಹಿಂದೆ ಜನ ಭಯ ಪಡುವ ಸ್ಥಿತಿ ನಿರ್ಮಾಣವಾಗಿತ್ತು. ಕಳ್ಳರಿಬ್ಬರಿಂದ ಸುಮಾರು 30 ಜನ ಪೊಲೀಸರನ್ನು ಕ್ವಾರಂಟೈನ್ ಮಾಡಲಾಗಿತ್ತು. ಅದರಿಂದಾಗಿ ಇಡೀ ಠಾಣೆಗೆ ಠಾಣೆಯೇ ಖಾಲಿ ಆದಂತಿತ್ತು.
ಕೊರೊನಾ ಗೆದ್ದು ಬಂದ ಎಎಸ್ಐ: ಐಜಿಪಿ-ಎಸ್ಪಿಯಿಂದ ಭವ್ಯ ಸ್ವಾಗತ ಕೊರೊನಾ ಗೆದ್ದು ಬಂದ ಎಎಸ್ಐಗೆ ಸ್ವಾಗತ:
ಕಳೆದ ತಿಂಗಳ 27ನೇ ತಾರೀಖಿನಂದು ಹೆಬ್ಬಗೋಡಿ ಠಾಣೆ ಎಎಸ್ಐ ಕೋದಂಡರಾಮರೆಡ್ಡಿ ಅವರಿಗೆ ಸೋಂಕು ತಗುಲಿರುವುದು ದೃಢವಾಗಿತ್ತು. ಇದರಿಂದ ಇಡೀ ಠಾಣೆಗೆ ಠಾಣೆಯೇ ಬೆಚ್ಚಿಬಿದ್ದಿತ್ತು. ನಂತರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಎಎಸ್ಐಗೆ ಚಿಕಿತ್ಸೆ ಕೊಡಿಸಿ ಗುಣಮುಖರಾಗಲು ಎಲ್ಲರು ಸಹ ಶ್ರಮ ಪಟ್ಟಿದ್ದರು.
ಸದ್ಯ ಕೋವಿಡ್ ವಾರಿಯರ್ ಕೊದಂಡರಾಮ ಅವರನ್ನು ಇಂದು ಐಜಿಪಿ ಕೆ.ವಿ.ಶರತ್ ಚಂದ್ರ ಮತ್ತು ಎಸ್ಪಿ ರವಿ ಚನ್ನಣ್ಣನವರ್ ನೇತೃತ್ವದಲ್ಲಿ ಹೂಮಳೆ ಸುರಿಸಿ ಸನ್ಮಾನ ಮಾಡಿ ಇಂದಿನಿಂದ ಠಾಣೆಗೆ ಬರುವಂತೆ ಆಹ್ವಾನ ನೀಡಿದ್ರು. ಒಟ್ಟಿನಲ್ಲಿ ಕೋವಿಡ್ ಭೀತಿಯಿಂದ ಮುಕ್ತವಾಗಿರುವ ಠಾಣೆ ಇದೀಗ ಮೊದಲಿನಂತಾಗಿದ್ದು, ಎಂದಿನಂತೆ ಕೆಲಸ ಮುಂದುವರೆದಿದೆ.