ಹರಿಹರ: ಲಾಕ್ಡೌನ್ ಪರಿಣಾಮ ನಗರದಲ್ಲಿ ಕಳೆದ 76 ದಿನಗಳಿಂದ ಮುಚ್ಚಿದ್ದ ದೇವಸ್ಥಾನಗಳ ಬಾಗಿಲು ತೆರೆಯಲಾಗಿದ್ದು, ದೇವರ ದರ್ಶನ ಪಡೆದು ಭಕ್ತರು ಪುನೀತರಾದರು.
ನಗರದ ಐತಿಹಾಸಿಕ ದೇವಾಲಯವಾದ ಶ್ರೀ ಹರಿಹರೇಶ್ವರ ಸ್ವಾಮಿ ಮತ್ತು ಗ್ರಾಮ ದೇವತೆ ಊರಮ್ಮದೇವಿ ಸೇರಿದಂತೆ ಮುಜರಾಯಿ ಇಲಾಖೆಗೆ ಸೇರಿದ ಎಲ್ಲಾ ದೇವಸ್ಥಾನಗಳಲ್ಲಿ ಪೂಜಾ ವಿಧಿ ವಿಧಾನಗಳು ಬೆಳಿಗ್ಗೆಯಿಂದಲೇ ಆರಂಭವಾಗಿ ನೂರಾರು ಭಕ್ತರು ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು.
ಕ್ಷೇತ್ರನಾಥ ಶ್ರೀ ಹರಿಹರೇಶ್ವರ ಸ್ವಾಮಿಗೆ ಬೆಳಗ್ಗೆ ಐದು ಗಂಟೆಯಿಂದ ಅರ್ಚಕರು ಜಲಾಭಿಷೇಕ, ಕುಂಕುಮಾರ್ಚನೆ, ಪಂಚಾಮೃತ ಅಭಿಷೇಕ, ಎಳನೀರಿನ ಅಭಿಷೇಕ ಹಾಗೂ ವಿಶೇಷ ಪೂಜಾ ವಿಧಿ ವಿಧಾನಗಳು ನಡೆಸಿ 7 ಗಂಟೆಯ ವೇಳೆಗೆ ಮಹಾ ಮಂಗಳಾರತಿ ನೆರವೇರಿಸಿದರು.
ಎಲ್ಲಾ ದೇವಾಲಯಗಳಲ್ಲಿ ಭಕ್ತರಿಗೆ ಯಾವುದೇ ಪ್ರಸಾದ ಹಾಗೂ ನೈವೇದ್ಯ, ತೀರ್ಥ ಸೇವನೆ ನೀಡದೇ ಮಂಗಳಾರತಿಯನ್ನು ಮಾತ್ರ ನೀಡಲಾಯಿತು. ದೇವರ ದರ್ಶನಕ್ಕೆ ಬಂದ ಭಕ್ತರಿಗೆ ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯ ಹಾಗೂ ಸಾಮಾಜಿಕ ಅಂತರ ಕಾಪಾಡುವಂತೆ ಮುಜರಾಯಿ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು.
ಪ್ರತಿದಿನ ಬೆಳಗ್ಗೆ 7 ರಿಂದ ಮಧ್ಯಾಹ್ನ 12ರವರೆಗೆ ನಂತರ ಸಂಜೆ 5ರಿಂದ 8:30ರ ಮಹಾ ಮಂಗಳಾರತಿವರೆಗೂ ಭಕ್ತರಿಗೆ ದೇವರ ದರ್ಶನ ನೀಡಲಾಗಿದೆ ಎಂದು ಅರ್ಚಕರಾದ ಹರಿಶಂಕರ್ ತಿಳಿಸಿದ್ದಾರೆ.
ಅದೇ ರೀತಿ ತಾಲೂಕಿನ ಲಕ್ಷ್ಮೀ ದೇವಸ್ಥಾನ, ನೂರಾಎಂಟು ಲಿಂಗೇಶ್ವರ ದೇವಸ್ಥಾನ, ಜೋಡು ಬಸವೇಶ್ವರ ದೇವಸ್ಥಾನ, ಕೊಮಾರನಹಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಾಲಯ ಹಾಗೂ ಉಕ್ಕಡಗಾತ್ರಿ ಕರಿಬಸಜ್ಜಯ್ಯ, ನಿಟ್ಟೂರು ಆಂಜನೇಯ್ಯ ದೇವಸ್ಥಾನಗಳಲ್ಲಿ ಪೂಜೆ ನೆರವೇರಿಸಲಾಯಿತು.
ನಗರದಲ್ಲಿನ ದರ್ಗಾ, ಮಸೀದಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಾರ್ಥನೆ ನೆರವೇರಿಸಿದ್ದಾರೆಂದು ತಿಳಿದುಬಂದಿದೆ. ಚರ್ಚ್‌ಗಳಲ್ಲಿ ಭಕ್ತರಿಗೆ ಪ್ರವೇಶ ನೀಡಿಲ್ಲ.