ಮುಂಬೈ: ಸಾವಿರಾರು ಕ್ರಿಕೆಟಿಗರಿಗೆ ಸ್ಪೂರ್ತಿಯಾಗಿರುವ, ಲಕ್ಷಾಂತರ ಅಭಿಮಾನಿಗಳ ಪಾಲಿಗೆ ಕ್ರಿಕೆಟ್ ದೇವರಾಗಿರುವ ವಿಶ್ವಕಂಡ ಶ್ರೇಷ್ಠ ಬ್ಯಾಟ್ಸ್ಮನ್ ಸಚಿನ್ ತೆಂಡೂಲ್ಕರ್ ಇಂದು 46 ನೇ ವಸಂತಕ್ಕೆ ದಾಪುಗಾಲಿಟ್ಟಿದ್ದಾರೆ.
ಹನ್ನೊಂದರ ವಯಸ್ಸಿನಲ್ಲಿಯೇ ಕ್ರಿಕೆಟ್ ಬ್ಯಾಟ್ ಕೈಗೆತ್ತಿಕೊಂಡು ಆಡಲು ಪ್ರಾರಂಭಿಸಿ ಕೇವಲ ಹದಿನಾರನೇ ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿ ಭಾರತ ಕ್ರಿಕೆಟ್ ತಂಡಕ್ಕೆ ಬರೋಬ್ಬರಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಮುಂಬೈನ ಸಚಿನ್ ರಮೇಶ್ ತೆಂಡೂಲ್ಕರ್ ಇಂದು ತಮ್ಮ 46 ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
1973ರ ಏಪ್ರಿಲ್ 24 ರಂದು ಜನಿಸಿದ ಸಚಿನ್ ಕ್ರಿಕೆಟ್ ಇತಿಹಾಸದಲ್ಲಿ ಬ್ಯಾಟಿಂಗ್ ದಾಖಲೆಗಳನ್ನೆಲ್ಲಾ ತಮ್ಮ ಹೆಸರಿನಲ್ಲೆ ಬರೆದುಕೊಂಡಿದ್ದಾರೆ. ಕೇವಲ ಒಂದೇ ಸೀಸನ್ ಪ್ರಥಮ ದರ್ಜೆಯಾಡಿದ್ದ ಸಚಿನ್ 16ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಪದಾರ್ಪಣೆ ಮಾಡಿದ್ದರು. ಟೆಸ್ಟ್ ಕ್ರಿಕೆಟ್ಗೆ 16 ವರ್ಷ 205 ದಿನಗಳಲ್ಲಿ, ಏಕದಿನ ಕ್ರಿಕೆಟ್ಗೆ 16 ವರ್ಷ 238 ದಿನಗಳಲ್ಲಿ ಪದಾರ್ಪಣೆ ಮಾಡುವ ಮೂಲಕ ಭಾರತ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಅಟಗಾರ ಎಂಬ ದಾಖಲೆ ಇಂದಿಗೂ ಅವರ ಹೆಸರಿನಲ್ಲಿಯೇ ಇದೆ.
ಬ್ಯಾಟ್ಸ್ಮನ್ ಆಗಿ ಸಚಿನ್ ದಾಖಲೆಗಳು
ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚುರನ್ ಗಳಿಸಿರುವ ದಾಖಲೆ ಹೊಂದಿದ್ದಾರೆ. ಸಚಿನ್ ಟೆಸ್ಟ್ ಕ್ರಿಕೆಟ್ನಲ್ಲಿ 200 ಪಂದ್ಯಗಳನ್ನಾಡಿದ್ದು, 15,921 ರನ್ ಹಾಗೂ 463 ಏಕದಿನ ಪಂದ್ಯಗಳಿಂದ ಲ್ಲಿ 18,426 ರನ್ಗಳಿಸಿದ್ದಾರೆ. ಟೆಸ್ಟ್ನಲ್ಲಿ 6 ದ್ವಿಶತಕ, 51 ಶತಕ, 68 ಅರ್ಧಶತಕ ಬಾರಿಸಿದ್ದರೆ, ಏಕದಿನ ಕ್ರಿಕೆಟ್ನಲ್ಲಿ 1 ದ್ವಿಶತಕ,49 ಅರ್ಧಶತಕ,96 ಅರ್ಧಶತಕ ಭಾರಿಸಿದ್ದಾರೆ.
ಬೌಲರ್ ಆಗಿಯೂ ಸಚಿನ್ ಸಾಧನೆ:ಸಚಿನ್ ಟೆಸ್ಟ್ ಕ್ರಿಕೆಟ್ನಲ್ಲಿ 46 ವಿಕೆಟ್ ಪಡೆದಿದ್ದಾರೆ. 10 ರನ್ಗೆ3 ವಿಕೆಟ್ ಪಡೆದಿರುವುದು ಅವರ ಬೆಸ್ಟ್ ಬೌಲಿಂಗ್ ಆಗಿದೆ. ಏಕದಿನ ಕ್ರಿಕೆಟ್ನಲ್ಲಿ 154 ವಿಕೆಟ್ ಪಡೆದಿದ್ದು 32 ಕ್ಕೆ 5 ವಿಕೆಟ್ ಪಡೆದಿರುವುದು ಅತ್ಯುತ್ತಮ ಪ್ರದರ್ಶನವಾಗಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸಚಿನ್ರ ಅಪರೂಪದ ದಾಖಲೆಗಳು:
- ಭಾರತ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ
- ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ನಲ್ಲಿ ಶತಕ ಸಿಡಿಸಿದ 2 ನೇ ಕಿರಿಯ ಆಟಗಾರ
- ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚ ಪಂದ್ಯಗಳನ್ನಾಡಿರುವ ದಾಖಲೆ. ಟೆಸ್ಟ್ 200, ಏಕದಿನ ಪಂದ್ಯ (463)
- ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಟೆಸ್ಟ್ 15921,ಏಕದಿನ 18,426
- ಏಕದಿನ ಕ್ರಿಕೆಟ್ನಲ್ಲಿ ಚೊಚ್ಚಲ ದ್ವಿಶತಕ ಬಾರಿಸಿದ ವಿಶ್ವದ ಮೊದಲ ಬ್ಯಾಟ್ಸ್ಮನ್(200)
- ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕ: ಏಕದಿನ(49) ಟೆಸ್ಟ್(51)
- ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚ ಅರ್ಧಶತಕ(96) ಸಿಡಿಸಿರುವ ಬ್ಯಾಟ್ಸ್ಮನ್
- ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ಗಳಿಸಿರುವ ಬ್ಯಾಟ್ಸ್ಮನ್(673...2003 ರ ವಿಶ್ವಕಪ್)
ಪ್ರಮುಖ ಪ್ರಶಸ್ತಿಗಳು:
- 2002 ರಲ್ಲಿ ವಿಸ್ಡನ್ ಕ್ರಿಕೆಟರ್ಸ್ ಅವಾರ್ಡ್. ಟೆಸ್ಟ್ ಕ್ರಿಕೆಟ್ನಲ್ಲಿ ಬ್ರಾಡ್ಮನ್ ನಂತರ 2ನೇ ವಿಶ್ವಶ್ರೇಷ್ಠ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆ, ಏಕದಿನ ಕ್ರಿಕೆಟ್ನಲ್ಲಿ ಸರ್ ವಿವಿಯನ್ ರಿಚರ್ಡ್ಸ್ ನಂತರದ ಶ್ರೇಷ್ಠ ಬ್ಯಾಟ್ಸ್ಮನ್
- 2013 ರಲ್ಲಿ ವಿಸ್ಡನ್ ಬಿಡುಗಡೆ ಮಾಡಿದ 150 ವರ್ಷಗಳ ಕ್ರಿಕೆಟ್ ಇತಿಹಾಸದ ಬೆಸ್ಟ್ ಟೆಸ್ಟ್ 11ರ ಬಳಗಳದಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಕ್ರಿಕೆಟಿಗ
- 1994 ರಲ್ಲಿ ಅರ್ಜುನ ಪ್ರಶಸ್ತಿ
- 1999 ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ
- 1999 ಪದ್ಮಶ್ರೀ ಪ್ರಶಸ್ತಿ
- 2008 ಪದ್ಮವಿಭೂಷಣ ಪ್ರಶಸ್ತಿ
- 2013ರಲ್ಲಿ ಭಾರತದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನ ಪಡೆಯುವ ಮೂಲಕ ಈ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ಎಂಬ ಗೌರವ
ಭಾರತ ಕ್ರೀಡಾ ಜಗತ್ತಿನಲ್ಲಿ ಧ್ರುವ ತಾರೆಯಾಗಿ ಮಿಂಚಿದ ಕ್ರಿಕೆಟ್ ದೇವರು ನೂರಾರು ವರ್ಷಗಳ ಕಾಲ ಸುಖವಾಗಿ ಬಾಳಲೆಂದು ಹಾರೈಸೋಣ....