ಕರ್ನಾಟಕ

karnataka

ETV Bharat / briefs

ಗುರುಗ್ರಾಮದಲ್ಲಿ ಆಕ್ಸಿಜನ್​ ಸಿಗದೇ ನಾಲ್ವರ ಸಾವು ಪ್ರಕರಣ.. ತನಿಖೆಗೆ ಡಿಸಿ ಆದೇಶ - 4 died due to oxygen crisis issue DC order to probe

ಭಾನುವಾರ ಬೆಳಗ್ಗೆ 11 ಗಂಟೆಗೆ ಕತುರಿಯಾ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ ಗಂಭೀರ ಪರಿಸ್ಥಿತಿಯಲ್ಲಿದ್ದ ನಾಲ್ವರು ರೋಗಿಗಳು ಸಾವನ್ನಪ್ಪಿದರು. ಈ ಪ್ರಕರಣದ ತನಿಖೆಗೆ ಗುರುಗ್ರಾಮ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಆಕ್ಸಿಜನ್
ಆಕ್ಸಿಜನ್

By

Published : Apr 26, 2021, 4:07 PM IST

Updated : Apr 26, 2021, 4:46 PM IST

ಗುರುಗ್ರಾಮ(ಹರಿಯಾಣ) :ವೈದ್ಯಕೀಯ ಆಮ್ಲಜನಕದ ಕೊರತೆಯಿಂದಾಗಿ ಭಾನುವಾರ ಇಲ್ಲಿನ ಕತುರಿಯಾ ಆಸ್ಪತ್ರೆಯಲ್ಲಿ ನಾಲ್ವರು ರೋಗಿಗಳು ಸಾವನ್ನಪ್ಪಿದ ಘಟನೆ ಬಗ್ಗೆ ಮ್ಯಾಜಿಸ್ಟ್ರಿಯಲ್ ತನಿಖೆಗೆ ಜಿಲ್ಲಾಧಿಕಾರಿ ಯಶ್ ಗರ್ಗ್ ಆದೇಶಿಸಿದ್ದಾರೆ.

ಸಾವಿನ ಹಿಂದಿನ ನಿಖರ ಕಾರಣವನ್ನು ಕಂಡುಹಿಡಿಯಲು ಗುರುಗ್ರಾಮದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಜಿತೇಂದರ್ ಕುಮಾರ್ ಅವರು ಘಟನೆ ಕುರಿತು ತನಿಖೆ ನಡೆಸಲಿದ್ದಾರೆ.

ಸಾಕಷ್ಟು ಆಮ್ಲಜನಕದ ಪೂರೈಕೆ ಹೊರತಾಗಿಯೂ, ಆಸ್ಪತ್ರೆಯಲ್ಲಿ ನಾಲ್ವರು ರೋಗಿಗಳು ಸಾವನ್ನಪ್ಪಿದ್ದಾರೆ. ಈ ವಿಷಯವನ್ನು ಗುರುಗ್ರಾಮ ಎಸ್‌ಡಿಎಂ ತನಿಖೆ ನಡೆಸಲಿದೆ ಎಂದು ಜಿಲ್ಲಾ ವಕ್ತಾರರು ತಿಳಿಸಿದ್ದಾರೆ.

ನಿನ್ನೆಯ ಘಟನೆಯ ಬಳಿಕ, ಆಸ್ಪತ್ರೆಯಲ್ಲಿ ದಾಖಲಾದ ಕೆಲವು ರೋಗಿಗಳ ಸಂಬಂಧಿಕರು ವೈದ್ಯಕೀಯ ಆಮ್ಲಜನಕದ ಕೊರತೆಯಿದೆ ಎಂದು ಆರೋಪಿಸಿ ಆಸ್ಪತ್ರೆಯ ಹೊರಗೆ ಪ್ರತಿಭಟನೆ ಕೂಡಾ ನಡೆಸಿದ್ದರು.

ಆದ್ರೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಗೆ ಎಷ್ಟೇ ಬಾರಿ ವಿನಂತಿಸಿದರೂ ಆಮ್ಲಜನಕ ಪೂರೈಕೆ ಮಾಡುತ್ತಿಲ್ಲ ಎಂದು ಆಸ್ಪತ್ರೆ ಹೇಳಿಕೊಂಡಿತ್ತು.

ನಿನ್ನೆ ನಡೆದಿದ್ದು

ಭಾನುವಾರ ಬೆಳಗ್ಗೆ 11 ಗಂಟೆಗೆ ಕಥೂರಿಯಾ ಆಸ್ಪತ್ರೆಯಲ್ಲಿ ಆಮ್ಲಜನಕದ ಬಿಕ್ಕಟ್ಟು ಉದ್ಭವಿಸಿತ್ತು. ಆಸ್ಪತ್ರೆಯಲ್ಲಿ ದಾಖಲಾದ 50 ರೋಗಿಗಳಿಗೆ ಆಮ್ಲಜನಕದ ಪೂರೈಕೆಯಲ್ಲಾದ ಕೊರತೆಯಿಂದಾಗಿ ಅಪಾಯ ಎದುರಾಗಿತ್ತು. ತಕ್ಷಣವೇ ವೈದ್ಯರು ಮತ್ತು ಇತರ ಸಿಬ್ಬಂದಿ ರೋಗಿಗಳನ್ನು ನಿಭಾಯಿಸಲು ಪ್ರಯತ್ನಿಸಿದರು. ಆದರೆ, ಗಂಭೀರ ಪರಿಸ್ಥಿತಿಯಲ್ಲಿದ್ದ ನಾಲ್ಕು ರೋಗಿಗಳು ಆಮ್ಲಜನಕದ ಕೊರತೆಯಿಂದಾಗಿ ಸಾವನ್ನಪ್ಪಿದರು, ಎಂದು ಆಸ್ಪತ್ರೆಯ ನಿರ್ದೇಶಕ ಡಾ ಎ.ಕೆ ಕತುರಿಯಾ ಹೇಳಿದರು.

ಆಸ್ಪತ್ರೆಯಲ್ಲಿ ದಿನಕ್ಕೆ 50 ವೈದ್ಯಕೀಯ ಆಮ್ಲಜನಕ ಸಿಲಿಂಡರ್‌ಗಳ ಬಳಕೆ ಇದೆ. ಬೆಳಗ್ಗೆ 6ರ ಸುಮಾರಿಗೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಗೆ ಆಮ್ಲಜನಕದ ಬೇಡಿಕೆ ಇಟ್ಟಿದ್ದೆವು. ಆ ಸಮಯದಲ್ಲಿ ನಮ್ಮಲ್ಲಿ ಕೇವಲ 10 ಸಿಲಿಂಡರ್‌ಗಳು ಮಾತ್ರ ಉಳಿದಿತ್ತು. ಆದರೆ, ಜಿಲ್ಲಾಡಳಿತವು ಈ ಮನವಿಗೆ ಕಿವಿಗೊಡಲಿಲ್ಲ ಎಂದು ಡಾ.ಕಥೂರಿಯಾ ಆರೋಪಿಸಿದ್ದಾರೆ.

ಆದರೆ, ಜಿಲ್ಲಾ ಡ್ರಗ್​ ನಿಯಂತ್ರಣಾಧಿಕಾರಿ ಅಮಂದೀಪ್ ಚೌಹಾನ್, ಆಸ್ಪತ್ರೆ ಮಾಡಿದ ಆರೋಪಗಳನ್ನು ಅಲ್ಲಗಳೆದು, ಆಸ್ಪತ್ರೆಯಿಂದ ಆಮ್ಲಜನಕದ ಬೇಡಿಕೆಯನ್ನು ಔಷಧ ವಿಭಾಗಕ್ಕೆ ಕಳುಹಿಸಲಾಗಿಲ್ಲ. ಆಮ್ಲಜನಕದ ಕೊರತೆಯ ಬಗ್ಗೆ ನಮಗೆ ಮಾಹಿತಿ ಬಂದಾಗ, ಎರಡು ಸಿಲಿಂಡರ್‌ಗಳನ್ನು ತಕ್ಷಣ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದರು.

ಈ ಸಾವುಗಳಿಗೆ ನಿಖರವಾದ ಕಾರಣವನ್ನು ಎಸ್‌ಡಿಎಂ ಕಂಡುಕೊಳ್ಳುತ್ತದೆ. ಆಮ್ಲಜನಕ ಬಿಕ್ಕಟ್ಟು ಇದೆ ಎಂದು ಆಸ್ಪತ್ರೆ ಹೇಳಿಕೊಳ್ಳುತ್ತಿದೆ. ಆಡಳಿತವೂ ನಿಯಮಿತ ಪೂರೈಕೆಯನ್ನು ನೀಡಿದೆ. ಆದ್ದರಿಂದ, ಎಲ್ಲಿ ಸಮಸ್ಯೆ ಉಂಟಾಯಿತು ಎಂಬುದನ್ನು ನಾವು ಕಂಡುಕೊಳ್ಳುತ್ತಿದ್ದೇವೆ. ಇದೆಲ್ಲದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಪ್ರಸಕ್ತ ತಿಂಗಳಲ್ಲಿ ಕೋವಿಡ್ ಪ್ರಕರಣಗಳು ಮತ್ತು ಸಾವುಗಳು ಹೆಚ್ಚಾಗಿದೆ ಎಂದು ಹರಿಯಾಣ ಸರ್ಕಾರ ವರದಿ ಮಾಡಿದೆ. ಆಸ್ಪತ್ರೆಗಳಲ್ಲಿ ವೈದ್ಯಕೀಯ ದ್ರವ ಆಮ್ಲಜನಕದ ಬೇಡಿಕೆಯೂ ಹೆಚ್ಚಾಗಿದೆ ಎಂದಿದೆ.

ಮೊನ್ನೆ ದೆಹಲಿಯಲ್ಲೂ ಆಕ್ಸಿಜನ್​ ಕೊರತೆಯಿಂದ 25 ರೋಗಿಗಳು ಉಸಿರು ನಿಲ್ಲಿಸಿದ್ದರು. ದೇಶದ ವಿವಿಧೆಡೆ ಇಂತಹ ಪ್ರಕರಣಗಳು ವರದಿಯಾಗುತ್ತಿವೆ.

Last Updated : Apr 26, 2021, 4:46 PM IST

ABOUT THE AUTHOR

...view details