ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆಗೆ ಅಂತರ್ಜಾಲದಲ್ಲಿ ಆಗುತ್ತಿರುವ ಅವಮಾನದ ಕುರಿತು ರಾಜ್ಯ ಸರ್ಕಾರ ಸೂಕ್ತ ತನಿಖೆ ನಡೆಸುವ ಭರವಸೆ ನೀಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇತ್ತೀಚೆಗೆ ಅಮೆಜಾನ್ ಮತ್ತು ಗೂಗಲ್ ಕನ್ನಡಿಗರನ್ನು ಅವಮಾನಿಸುತ್ತಿರುವುದು ಬಹುಮುಖ್ಯ ಪ್ರಶ್ನೆಯನ್ನು ಹುಟ್ಟುಹಾಕಿದೆ. ಕನ್ನಡದ ಹಿರಿಮೆಗೆ ನೋವನ್ನುಂಟು ಮಾಡುತ್ತಿರುವವರು ಯಾರು? ನಮ್ಮ ಹೆಮ್ಮೆಯ ಸಂಸ್ಕೃತಿಯಿಂದ ಮತ್ತು ಪರಂಪರೆಯಿಂದ ಯಾರಿಗೇನು ತೊಂದರೆಯಾಗಿದೆ? ಕರ್ನಾಟಕ ಸರ್ಕಾರ ಈ ಕುರಿತು ತನಿಖೆ ನಡೆಸುವ ಭರವಸೆಯಿದೆ ಎಂದಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ, ಬಿಜೆಪಿ ಸರ್ಕಾರ ಮತ್ತೊಮ್ಮೆ ತೆರಿಗೆ ಮೊತ್ತ ಹೆಚ್ಚಿಸಿದೆ. ಕರ್ನಾಟಕದಲ್ಲಿ ಪೆಟ್ರೋಲ್ ಬೆಲೆ 100ಕ್ಕೆ ತಲುಪಿದೆ. ತೆರಿಗೆ ಹಣ ಏನಾಗುತ್ತಿದೆ? ಬಿಜೆಪಿ ನಾಯಕರು ಒಂದು ಡೋಸ್ ಲಸಿಕೆಗೆ 900 ರೂ ಪಡೆಯುತ್ತಾರೆ. (ಕಮಿಷನ್ 700 ರೂ) ಆರ್ಥಿಕ ಪರಿಹಾರದ ಪ್ಯಾಕೇಜ್ ಮೊತ್ತವೂ ಜನರಿಗೆ ತಲುಪದಾಗಿದೆ. ನಮ್ಮ ತೆರಿಗೆ ಮೊತ್ತ ಎಲ್ಲಿಗೆ ಹೋಗುತ್ತಿದೆ? ಎಂದು ಪ್ರಶ್ನಿಸಿದ್ದಾರೆ.
ಜನರಿಗಷ್ಟೇ ಅಲ್ಲ, ಹಸುಗಳಿಗೂ ಲಸಿಕೆ ನೀಡುವಲ್ಲಿ ಬಿಜೆಪಿ ವಿಫಲವಾಗಿದೆ. ಹಸುಗಳಲ್ಲಿ ಕಂಡುಬರುತ್ತಿರುವ ಕಾಲು ಮತ್ತು ಬಾಯಿ ರೋಗಗಳಿಂದ ಕರ್ನಾಟಕದ ರೈತರು ಹೈರಾಣಾಗಿದ್ದಾರೆ. ಸರ್ಕಾರವು ಬಯಸಿದಲ್ಲಿ ಈ ಸಮಸ್ಯೆಗೆ ನೆರವು ನೀಡಲು ಕಾಂಗ್ರೆಸ್ ಪಕ್ಷ ಸಿದ್ಧವಿದೆ ಎಂದು ಮತ್ತೊಮ್ಮೆ ಹೇಳಿದ್ದಾರೆ.