ಲಾಹೋರ್: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಧೋನಿ ನಾಯಕನಾಗಿ ನನಗೆ ಮಾದರಿ ಎಂದು ಹೇಳುವ ಮೂಲಕ ಧೋನಿಗಿಂತ 7 ವರ್ಷ ಹಿರಿಯನಾದ ಪಾಕಿಸ್ತಾನದ ಮಾಜಿ ನಾಯಕ ಎಲ್ಲರ ಅಚ್ಚರಿಗೆ ಕಾರಣರಾಗಿದ್ದಾರೆ.
ವಿಶ್ವಕಪ್ ವಿಶೇಷವಾಗಿ ಇಂಡಿಯಾ ಟುಡೇ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮಿಸ್ಬಾ ಉಲ್ಹಕ್, ನಾನೊಬ್ಬ ಬ್ಯಾಟ್ಸ್ಮನ್ ಆಗಿ ಸಚಿನ್ ತೆಂಡೂಲ್ಕರ್ರನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳುವೆ ಎಂದಿದ್ದ ಅವರು, ತಕ್ಷಣವೇ ತಮ್ಮ ಆಯ್ಕೆಯನ್ನು ಬದಲಾಯಿಸಿ ಮತ್ತೆ ಧೋನಿ ಹೆಸರನ್ನು ಸೂಚಿಸಿದರು. ಸಚಿನ್ರನ್ನು ನಾನು ಬ್ಯಾಟಿಂಗ್ ಐಡಲ್ ಆಗಿ ಸ್ವೀಕರಿಸುತ್ತೇನೆ. ಆದರೆ ಕ್ರಿಕೆಟರ್ ಹಾಗೂ ನಾಯಕನಾಗಿ ಧೋನಿ ನನಗೆ ಮಾದರಿಯಾಗಿದ್ದಾರೆ ಎಂದು ಮಿಸ್ಭಾ ಭಾರತೀಯ ಆಟಗಾರನನ್ನು ಹೊಗಳಿದ್ದಾರೆ.
ಧೋನಿ ನಾಯಕನಾದ ಮೇಲೆ ಭಾರತ ಕ್ರಿಕೆಟ್ ತಂಡದಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಅವರೊಬ್ಬ ಮಾನವೀಯ ಮೌಲ್ಯಯುಳ್ಳ ವ್ಯಕ್ತಿ, ಚಾಣಾಕ್ಷ ನಾಯಕ, ಅದ್ಭುತ ಬ್ಯಾಟ್ಸ್ಮನ್ ಹಾಗೂ ವಿಕೆಟ್ ಕೀಪರ್ ಆಗಿದ್ದು, ಭಾರತ ಕ್ರಿಕೆಟ್ ಅವರಿಂದ ತುಂಬಾ ಬದಲಾಗಿದೆ. ನಾಯಕರಾಗಿ ಗಂಗೂಲಿ ಹಾಗೂ ದ್ರಾವಿಡ್ ಸಹ ಉತ್ತಮ ಸೇವೆ ಸಲ್ಲಿಸಿದ್ದಾರೆ. ಆದರೆ ಭಾರತದ ಸಾಧನೆಯಲ್ಲಿ ಧೋನಿ ಪಾತ್ರವೇ ಹೆಚ್ಚಿದೆ ಎಂದಿದ್ದಾರೆ.
ಭಾರತ ತಂಡದ ಟಿ-20 ನಾಯಕನಾದ ವರ್ಷದಲ್ಲೇ ಧೋನಿ ತಮ್ಮ ತಂಡವನ್ನು ಚಾಂಪಿಯನ್ ಮಾಡಿದ್ದರು. ಏಕದಿನ ತಂಡದ ನಾಯಕನಾಗಿ 2011ರ ವಿಶ್ವಕಪ್, 2013ರ ಚಾಂಪಿಯನ್ ಟ್ರೋಫಿ ಹಾಗೂ 2008ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ತ್ರಿಕೋನ ಸರಣಿ ಗೆಲ್ಲಿಸಿಕೊಟ್ಟಿದ್ದರು. ಟೆಸ್ಟ್ ಕ್ರಿಕೆಟ್ನಲ್ಲೂ ಧೋನಿ ನಾಯಕತ್ವದಲ್ಲೇ ಮೊದಲ ಬಾರಿಗೆ ಭಾರತ ಅಗ್ರ ಸ್ಥಾನಕ್ಕೇರಿತ್ತು.