ಬೆಂಗಳೂರು: ನಗರದಲ್ಲಿ ಜಾರಿಯಲ್ಲಿರುವ ಲಾಕ್ಡೌನ್ ವೇಳೆ ಅನಗತ್ಯ ವಾಹನ ಸಂಚಾರ ನಿಯಂತ್ರಣ ಹಾಗೂ ಕೊರೊನಾ ಮಾರ್ಗಸೂಚಿ ಪಾಲನೆ ಕುರಿತಂತೆ ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ. ರವಿಕಾಂತೇಗೌಡ ನಗರದ ಎಲ್ಲಾ ಟ್ರಾಫಿಕ್ ಇನ್ ಸ್ಪೆಕ್ಟರ್ ಗಳ ಜೊತೆ ವರ್ಚುಯಲ್ ಸಭೆ ನಡೆಸಿದ್ದಾರೆ.
ಕರ್ತವ್ಯದಲ್ಲಿ ಲೋಪ, ಸಿಬ್ಬಂದಿ ಯೋಗಕ್ಷೇಮ ಹಾಗೂ ಕೊರೊನಾ ಹಿನ್ನೆಲೆ ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ಸಭೆಯಲ್ಲಿ ಸಮಾಲೋಚಿಸಿ ನಿಯಮ ಪಾಲಿಸುವಂತೆ ಸೂಚಿಸಿದ್ದಾರೆ.
ಇತ್ತೀಚೆಗೆ ನಗರ ಪೂರ್ವ ವಿಭಾಗದ ಚೆಕ್ ಪಾಯಿಂಟ್ ನಲ್ಲಿ ಕಾನೂನು ಸುವ್ಯವಸ್ಥೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದರೂ ಗೌರವ ನೀಡದ ಕಾರಣ ಸಿಬ್ಬಂದಿ ಸಸ್ಪೆಂಡ್ ಮಾಡಲಾಗಿದೆ. ಇನ್ನುಮುಂದೆ ಸ್ಥಳ ತಪಾಸಣೆ ಬರುವ ಮೇಲಾಧಿಕಾರಿಗಳಿಗೆ ಕಡ್ಡಾಯವಾಗಿ ಗೌರವ ನೀಡಬೇಕು. ಕಡ್ಡಾಯವಾಗಿ ಫೇಸ್ ಶಿಲ್ಡ್, ಮಾಸ್ಕ್ ಧರಿಸಿ ಸ್ಯಾನಿಟೈಸರ್ ಬಳಸಿಕೊಳ್ಳಬೇಕು. ಚೆಕ್ ಪಾಯಿಂಟ್ ಗಳಲ್ಲಿ ಕಾನೂನು ಸುವ್ಯವಸ್ಥೆ ಸಿಬ್ಬಂದಿಗಳೊಂದಿಗೆ ಸಮನ್ವಯ ಸಾಧಿಸಿ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದ್ದಾರೆ.