ಕೊಪ್ಪಳ:ಕೋವಿಡ್ ಕೇರ್ ಸೆಂಟರ್, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಮಾನಸಿಕವಾಗಿ ಕುಗ್ಗದಂತೆ ನಾನಾ ಪ್ರಯತ್ನಗಳು ನಡೆದಿದ್ದು, ಜಾನಪದ ಕಲಾವಿದ ಜೀವನಸಾಬ ಬಿನ್ನಾಳ ಹಾಸ್ಯ ಹಾಗೂ ಜಾನಪದ ಹಾಡುಗಳ ಮೂಲಕ ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ.
ಕೋವಿಡ್ ಕೇರ್ ಸೆಂಟರ್ನಲ್ಲಿ ಜಾನಪದ ಕಲಾವಿದನಿಂದ ಆತ್ಮಸ್ಥೈರ್ಯ ತುಂಬುವ ಕಾರ್ಯ
ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದಲ್ಲಿರುವ ಕೋವಿಡ್ ಕೇರ್ ಸೆಂಟರ್ನಲ್ಲಿ ಜಾನಪದ ಕಲಾವಿದ ಜೀವನಸಾಬ ಬಿನ್ನಾಳ ಹಾಸ್ಯ ಹಾಗೂ ಜಾನಪದ ಹಾಡುಗಳನ್ನು ಹಾಡುವ ಮೂಲಕ ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ.
ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದಲ್ಲಿರುವ ಕೋವಿಡ್ ಕೇರ್ ಸೆಂಟರ್ನಲ್ಲಿ ಹಾಸ್ಯ ಹಾಗೂ ಜಾನಪದ ಸಂಗೀತ ಕಾರ್ಯಕ್ರಮ ನೀಡಿದರು. ಶಿಕ್ಷಕರಾಗಿರುವ ಕಲಾವಿದ ಜೀವನಸಾಬ, ಎರಡು ದಿನಗಳ ಹಿಂದೆ ಕುಷ್ಟಗಿಯಲ್ಲಿರುವ ಕೋವಿಡ್ ಕೇರ್ ಸೆಂಟರ್ನಲ್ಲಿ ಒಂದು ಗಂಟೆ ಕಾಲ ಕಾರ್ಯಕ್ರಮ ನೀಡಿ ಸೋಂಕಿತರಲ್ಲಿ ಚೈತನ್ಯ ತುಂಬಿದ್ದರು. ಮತ್ತೆ ನಿನ್ನೆ (ಬುಧವಾರ) ಸಂಜೆ ವೇಳೆಗೆ ಕುಷ್ಟಗಿ ತಾಲೂಕಿನ ದೋಟಿಹಾಳದಲ್ಲಿನ ಕೋವಿಡ್ ಕೇರ್ ಸೆಂಟರ್ನಲ್ಲಿ ತಮ್ಮ ಕಾರ್ಯಕ್ರಮದ ಮೂಲಕ ರಂಜಿಸಿದರು.
ಜೀವನ್ ಸಾಬ ಅವರ ಸಂಗೀತ ಹಾಗೂ ಹಾಸ್ಯ ಕಾರ್ಯಕ್ರಮದಿಂದ ಕೊವಿಡ್ ಕೇರ್ ಸೆಂಟರ್ನಲ್ಲಿರುವ 17 ಜನ ಸೋಂಕಿತರು ಉಲ್ಲಾಸಗೊಂಡು ತಮ್ಮ ಭಯ ಹಾಗೂ ನೋವನ್ನು ಮರೆತು ಖುಷಿಪಟ್ಟರು. ಜೀವನಸಾಬ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಸಂಗೀತ ಹಾಗೂ ಹಾಸ್ಯ ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ. ಸೋಂಕಿತರು ಭಯ ಪಡದೆ ಆತ್ಮಸ್ಥೈರ್ಯದಿಂದ ಕೊರೊನಾ ಗೆಲ್ಲಬಹುದು. ಜೀವನಸಾಬ ಅವರ ಕಾರ್ಯಕ್ರಮ ಸೋಂಕಿತರಲ್ಲಿ ಆತ್ಮವಿಶ್ವಾಸ ಮೂಡಿಸಿದೆ ಎಂದು ಆರೋಗ್ಯ ಸಿಬ್ಬಂದಿ ಹೇಳಿದ್ದಾರೆ.