ಬೆಂಗಳೂರು:ಕೋವಿಡ್ ಕರ್ಫ್ಯೂವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಎಲ್ಲಾ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದು, ಇದರ ಮೇಲುಸ್ತುವಾರಿಗೆ ಐವರು ಎಡಿಜಿಪಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಜಾರಿಗೆ ತಂದಿರುವ 14 ದಿನದ ನಿರ್ಬಂಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಎಲ್ಲಾ ಎಸ್ಪಿಗಳಿಗೆ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ನಾವು 5 ಜನ ಎಡಿಜಿಪಿ ಗಳನ್ನು ಮೇಲುಸ್ತುವಾರಿಗೆ ನಿಯೋಜನೆ ಮಾಡಿದ್ದೇವೆ. ಗೃಹ ಇಲಾಖೆಯಿಂದ 8,500 ಗೃಹ ರಕ್ಷಕ ಸಿಬ್ಬಂದಿ ಬಳಕೆಗೆ ಅನುಮತಿ ಕೊಡಲಾಗಿದೆ. ಇವರನ್ನು ಕೋವಿಡ್ ಕೆಲಸಕ್ಕೆ ಬಳಸಿಕೊಳ್ಳಬಹುದು. ಇನ್ನು ಹೆಚ್ಚಿಗೆ ಬೇಕಾದ ಅವಕಾಶಕ್ಕೆ ಸಿದ್ದವಿದ್ದೇವೆ ಎಂದರು.
ನಮ್ಮ ಎಲ್ಲಾ ಜೈಲುಗಳನ್ನು ಸ್ಯಾನಿಟೈಸೇಷನ್ ಮಾಡಲಾಗುತ್ತದೆ. 300 ಜನಕ್ಕೆ ಕೊರೊನಾ ಪಾಸಿಟಿವ್ ಬಂದಿದೆ. ಅವರನ್ನ ಐಸೋಲೇಷನ್ ಮಾಡಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ, ಅದನ್ನೂ ಇಂದು ಪರಿಶೀಲನೆ ನಡೆಸುತ್ತೇನೆ ಎಂದರು.
ಬೆಂಗಳೂರಿನಲ್ಲಿ ಸಿವಿಲ್ ಡಿಫೆಕ್ಸ್ ಸ್ವಯಂ ಸೇವಕರಿದ್ದಾರೆ. ಅವರನ್ನ ಪ್ರತಿ ವಾರ್ಡ್ನಲ್ಲಿ ಟ್ರ್ಯಾಕಿಂಗ್, ಟ್ರೇಸಿಂಗ್, ಹೋಂ ಐಸೋಲೇಷನ್ ವ್ಯವಸ್ಥೆಗೆ ಬಳಕೆ ಮಾಡಲು ತೀರ್ಮಾನ ವಾಗಿದೆ. ಅದೇ ರೀತಿ ಅಗ್ನಿಶಾಮಕ ದಳ ಬಳಕೆಗೂ ಸಿಎಂ ಆದೇಶ ಮಾಡಲಿದ್ದಾರೆ ಎಂದರು.
ಕಠಿಣ ಕರ್ಫ್ಯೂ ವೇಳೆ ಕೆಲ ಸೇವೆಗಳಿಗೆ ಅನುಮತಿ ನೀಡಲಾಗಿದೆ. ಹಾಗಾಗಿ ಅವರು ಸಂಚಾರ ನಡೆಸುತ್ತಿದ್ದಾರೆ, ಹಾಗಾಗಿ ರಸ್ತೆಯಲ್ಲಿ ಓಡಾಡುವವರ ಸಂಖ್ಯೆ ಹೆಚ್ಚಿದೆ. ಇನ್ಮುಂದೆ ಕಂಪನಿ ಪಾಸ್ ಇದ್ದವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಪಾಸ್ ಇಲ್ಲದವರ ಓಡಾಟಕ್ಕೆ ಬ್ರೇಕ್ ಹಾಕಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಮೇಕ್ ಇನ್ ಬಾಂಗ್ಲಾ ರೆಮ್ಡೆಸಿವಿರ್ ಕುರಿತು ತನಿಖೆ:
ಮೇಡ್ ಇನ್ ಬಾಂಗ್ಲಾ ಹೆಸರಿನ ರೆಮ್ಡೆಸಿವಿರ್ ಔಷಧ ಪತ್ತೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸಿಸಿಬಿ ದಾಳಿ ಮಾಡಿದ್ದಾಗ ರೆಮ್ಡೆಸಿವಿರ್ಗಳನ್ನು ವಶಕ್ಕೆ ಪಡೆಯಲಾಗಿದೆ. ಅವುಗಳನ್ನು ಪರಿಶೀಲಿಸಿದಾಗ ಮೇಡ್ ಇನ್ ಬಾಂಗ್ಲಾ ಎನ್ನುವುದು ಪತ್ತೆಯಾಗಿದೆ. ಅದನ್ನು ಸೀಜ್ ಮಾಡಿದ್ದು, ಎಲ್ಲಿಂದ ಬಂದಿದೆ ಎಂದು ತನಿಖೆ ಮಾಡಲಾಗುತ್ತಿದೆ ಎಂದರು.