ಮಂಡ್ಯ: ಮಂಡ್ಯದ ಪ್ರಾದೇಶಿಕ ಮುಕ್ತ ವಿಶ್ವವಿದ್ಯಾಲಯದ ಕಚೇರಿಯಲ್ಲಿ ಅಧಿಕಾರಿಗಳಿಬ್ಬರು ಕುರ್ಚಿಗಾಗಿ ಹಗ್ಗಜಗ್ಗಾಟ ನಡೆಸುತ್ತಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಕಚೇರಿಯ ಎದುರಿಗೆ ಉಪವಾಸ ಕುಳಿತು ಹೋರಾಟ ಮಾಡುತ್ತಿದ್ದಾರೆ.
ಉಪವಾಸ ನಡೆಸುತ್ತಿರುವ ಸುಧಾಕರ್ ಹೊಸಳ್ಳಿ ಘಟನೆ ವಿವರ: ಡಾ.ಸುಧಾಕರ್ ಕೊಸಳ್ಳಿ ಎಂಬ ಅಧಿಕಾರಿ ಮೇ 27 ರಂದು ದಾವಣಗೆರೆಯ ಪ್ರಾದೇಶಿಕ ಕಚೇರಿಯಿಂದ ಮಂಡ್ಯಕ್ಕೆ ವರ್ಗವಾಗಿ ಬಂದು ಅಧಿಕಾರ ವಹಿಸಿಕೊಂಡಿದ್ದರು. ಆದರೆ, ಕರ್ನಾಟಕ ಮುಕ್ತ ವಿವಿಯ ನೂತನ ಕುಲಪತಿಯಿಂದ ಜೂನ್ 03 ರಂದು ಈ ಹಿಂದಿನ ಕುಲಪತಿ ಮಾಡಿದ್ದ ವರ್ಗಾವಣೆ ಆದೇಶಕ್ಕೆ ತಡೆ ಹಿಡಿದು, ಯಥಾಸ್ಥಿತಿ ಕಾಪಾಡುವಂತೆ ಸೂಚನೆ ನೀಡಿದ್ದರು.
ಈ ಹಿಂದಿನ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ವರ್ಗಾವಣೆಗೆ ತಡೆ ನೀಡಿದ್ದ ಮುಕ್ತ ವಿವಿ ಕುಲಸಚಿವರ ಆದೇಶ ಹಿನ್ನೆಲೆಯಲ್ಲಿ ಅಧಿಕಾರಕ್ಕಾಗಿ ಹಗ್ಗ ಜಗ್ಗಾಟ ಆರಂಭವಾಗಿದೆ. ಪ್ರಾದೇಶಿಕ ನಿರ್ದೇಶಕರ ಸ್ಥಾನಕ್ಕಾಗಿ ಹೋರಾಟ ಶುರುವಾಗಿದ್ದು, ನಿರ್ದೇಶಕಿ ನಂದಕುಮಾರಿ ಮತ್ತು ಹೊಸದಾಗಿ ವರ್ಗವಾಗಿ ಬಂದಿದ್ದ ಸುಧಾಕರ ಹೊಸಳ್ಳಿ ನಡುವೆ ಕುರ್ಚಿಗಾಗಿ ಕಾದಾಟ ಆರಂಭವಾಗಿದೆ.
ಅಧಿಕಾರ ವಹಿಸಿಕೊಳ್ಳಲು ಮಹಿಳಾ ನಿರ್ದೇಶಕಿ ಬಿಡಲಿಲ್ಲ ಎಂದು ಆರೋಪಿಸಿ ಧರಣಿ ಕುಳಿತಿರುವ ಸುಧಾಕರ್ ಹೊಸಳ್ಳಿ ಘಟನೆಯನ್ನು ವಿವರಿಸಿ ವಿಶ್ವವಿದ್ಯಾಲಯ ಹಾಗೂ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಇವರಿಬ್ಬರ ಜಗಳದಲ್ಲಿ ಮಂಡ್ಯದ ಪ್ರಾದೇಶಿಕ ಮುಕ್ತ ವಿವಿಯಲ್ಲಿ ವಿದ್ಯಾರ್ಥಿಗಳು ಅತಂತ್ರ ಸ್ಥಿತಿಗೆ ತಲುಪಿದ್ದಾರೆ.