ಗೊಂಡಾ(ಯುಪಿ):17ನೇ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಅಭೂತಪೂರ್ವ ಗೆಲುವು ಪಡೆದಿದೆ. ಎನ್ ಡಿ ಎ ಮೈತ್ರಿಕೂಟ 542 ಕ್ಷೇತ್ರಗಳ ಪೈಕಿ 353 ಸ್ಥಾನಗಳಲ್ಲಿ ಗೆದ್ದು ಬೀಗಿದ್ದು ಮೋದಿ 2ನೇ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮುಸ್ಲೀಂ ದಂಪತಿ ತಮ್ಮ ಮಗುವಿಗೆ ನರೇಂದ್ರ ಮೋದಿ ಎಂದು ಹೆಸರಿಟ್ಟಿದ್ದಾರೆ.
ಮಗುವಿಗೆ 'ನರೇಂದ್ರ ಮೋದಿ' ನಾಮಕರಣ! ಮುಸ್ಲಿಂ ದಂಪತಿ ನಿರ್ಧಾರ
ಮೇ 23ರಂದು ಹೊರಬಿದ್ದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಅಭೂತಪೂರ್ವ ಯಶಸ್ಸು ಸಿಕ್ಕಿದೆ. ಈ ಐತಿಹಾಸಿಕ ಫಲಿತಾಂಶ ಸಿಕ್ಕಿದ ದಿನ ಜನಿಸಿದ ಮಗುವಿಗೆ 'ಮೋದಿ' ಹೆಸರಿಡಲು ಮುಸ್ಲಿಂ ದಂಪತಿ ಮುಂದಾಗಿದ್ದಾರೆ.
ಉತ್ತರಪ್ರದೇಶದ ಗೊಂಡಾದ ಆಸ್ಪತ್ರೆವೊಂದರಲ್ಲಿ ಮೇ 23ರಂದು ನವಜಾತ ಶಿಶು ಜನ್ಮತಾಳಿತ್ತು. ಇದೀಗ ಅದಕ್ಕೆ ನರೇಂದ್ರ ಮೋದಿ ಎಂದು ನಾಮಕರಣ ಮಾಡಲು ಮಗುವಿನ ಪೋಷಕರು ಮುಂದಾಗಿದ್ದಾರೆ. ತಾಯಿ ಮೆನಾಜ್ ಬೇಗಂ ಈ ನಿರ್ಧಾರ ಕೈಗೊಂಡಿದ್ದು, ಇವರ ಪತಿ ದುಬೈನಲ್ಲಿ ವಾಸವಾಗಿದ್ದಾರೆ. ಆತನಿಗೆ ಫೋನ್ ಮಾಡಿದಾಗ ಮೋದಿ ಗೆಲುವು ಸಾಧಿಸಿದ್ದಾರಾ? ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಹೌದು ಎಂದು ಹೇಳಿದ್ದಕ್ಕೆ ನನ್ನ ಮಗನಿಗೆ ನರೇಂದ್ರ ಮೋದಿ ಎಂದು ನಾಮಕರಣ ಮಾಡುವುದಾಗಿ ಪ್ರಕಟಿಸಿದ್ದಾರೆ ಎನ್ನಲಾಗಿದೆ.
ದೊಡ್ಡವನಾದ ಮೇಲೆ ಮೋದಿ ರೀತಿಯಲ್ಲಿ ನನ್ನ ಮಗ ಕೂಡ ದೇಶ ಸೇವೆ ಮಾಡಲಿ ಎಂಬುದು ನನ್ನ ಆಶಯ. ಅವರಂತೆ ನನ್ನ ಪುತ್ರ ಕೂಡ ಯಶಸ್ಸು ಕಾಣಲಿ ಎಂದು ಮಗುವಿನ ತಾಯಿ ಹಾರೈಸಿದ್ದಾರೆ.