ಬೆಂಗಳೂರು: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೇರಿದಂತೆ ಅಗಲಿದ ಗಣ್ಯರಿಗೆ ವಿಧಾನ ಪರಿಷತ್ನಲ್ಲಿ ಸಂತಾಪ ಸೂಚಿಸಲಾಯಿತು.
ಪ್ರಸಕ್ತ ಅಧಿವೇಶನದ ಮೊದಲ ದಿನದ ವಿಧಾನ ಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸಭಾಪತಿ ಪ್ರತಾಪ ಚಂದ್ರ ಶೆಟ್ಟಿ ಅವರು ಪ್ರಣಬ್ ಮುಖರ್ಜಿ, ಎಂ.ವಿ.ರಾಜಶೇಖರನ್, ಅಶೋಕ್ ಗಸ್ತಿ, ವಿ.ಸತ್ಯನಾರಾಯಣ, ವಿನ್ನಿಫ್ರೆಡ್ ಫರ್ನಾಂಡೀಸ್, ರಾಜಾ ರಂಗಪ್ಪ ನಾಯಕ, ಮದನ ಗೋಪಾಲ ನಾಯಕ್, ಜಿ.ರಾಮಮೂರ್ತಿ, ಹೊಸ್ತೋಟ ಗಜಾನನ ಭಟ್ಟ, ನಿಸಾರ್ ಅಹಮದ್, ಡಾ. ಶಾಮಲಾ ಜಿ. ಭಾವೆ, ಶಾಂತಾದೇವಿ, ಸುಭದ್ರಮ್ಮ, ಪಂಡಿತ್ ಜಸರಾಜ್ ಕೇಶವಾನಂದ ಭಾರತಿ ಶ್ರೀಗಳು ಸೇರಿದಂತೆ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ಗೊತ್ತುವಳಿ ಮಂಡಿಸಿದರು.
ಸಂತಾಪ ಸೂಚನೆ ವೇಳೆ ಮಾತನಾಡಿದ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ದೇಶಕ್ಕೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕೊಡುಗೆಯನ್ನು ಸ್ಮರಿಸಿದರು. ಭಯೋತ್ಪಾದಕರಾದ ಅಫ್ಜಲ್ ಗುರು, ಕಸಬ್ ಕ್ಷಮಾದಾನ ಅರ್ಜಿ ಸಲ್ಲಿಸಿದಾಗ ಕ್ಷಣವೂ ವಿಳಂಬ ಮಾಡದೆ ತಿರಸ್ಕಾರ ಮಾಡಿ, ದೇಶದ ಪರ ನಿರ್ಧಾರ ಮಾಡಿದ್ದರು. ರಾಜಕೀಯ ಏನೇ ಇದ್ದರೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಚೇರಿಗೆ ಭೇಟಿ ನೀಡಿದ್ದರು. ತಮ್ಮ ಪುಸ್ತಕದಲ್ಲೂ ದೇಶದ ಹೆಮ್ಮೆಯ ಪುತ್ರ ಹೆಗಡೇವಾರ್ ಜನ್ಮಸ್ಥಳಕ್ಕೆ ಬಂದಿದ್ದೇನೆ ಎಂದು ಬರೆದುಕೊಂಡಿದ್ದಾರೆ. ರಾಜಕಾರಣವನ್ನು ಮೀರಿ ಅವರಿಗೆ ಭಾರತ ರತ್ನ ಬಂದಿದೆ ಎಂದರು.
ಹಿರಿಯ ರಾಜಕಾರಣಿ ಎಂ.ವಿ.ರಾಜಶೇಖರನ್ ನಿಧನ ಅಪಾರ ನೋವು ತಂದಿದೆ. ಹಿರಿಯರು, ಆಳ ಜ್ಞಾನ ಹೊಂದಿದ್ದವರಾಗಿದ್ದರು. ಜೊತೆಗೆ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಅವರ ನಿಧನ ಸಹ ಅಪಾರ ನಷ್ಟ ಉಂಟು ಮಾಡಿದೆ. ಸವಿತಾ ಸಮಾಜದಂತಹ ಸಣ್ಣ ಸಮಾಜದಿಂದ ಬಂದು ಸೇವೆ ಸಲ್ಲಿಸಿದ್ದಾರೆ. ನಗರಸಭೆ ಸದಸ್ಯರಾಗಿ ರಾಜ್ಯಸಭೆವರೆಗೆ ಬಂದಿದ್ದರು. ಸರಳ, ಸಜ್ಜನಿಕೆ ರಾಜಕಾರಣಿಯಾಗಿದ್ದರು ಎಂದು ಸ್ಮರಿಸಿದರು.
ಶಾಸಕ ವಿ.ಸತ್ಯನಾರಾಯಣ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಜನರ ಮಧ್ಯೆ ಕೆಲಸ ಮಾಡುತ್ತಿದ್ದರು. ಬಡವರ, ದುರ್ಬಲರ ಪರ ಕೆಲಸ ಮಾಡಿದ್ದರು. ಇವರ ಹಠಾತ್ ನಿಧನವು ನೋವುಂಟು ಮಾಡಿದೆ. ಸರಳ ಸಜ್ಜನ ರಾಜಕಾರಣಿ ಕಳೆದುಕೊಂಡಿದ್ದೇವೆ ಎಂದರು.