ತಿರುನೆಲ್ವೇಲಿ (ತಮಿಳುನಾಡು):ಇಲ್ಲಿನ ಶಂಕರ್ ನಗರದಲ್ಲಿರುವ ಖಾಸಗಿ ಸಿಮೆಂಟ್ ಕಾರ್ಖಾನೆಯ ಆವರಣದಲ್ಲಿ ಇಟ್ಟಿದ್ದ ಜೋಡಿ ಪೈಪ್ ಬಾಂಬ್‌ಗಳನ್ನು ತೆಗೆದುಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಂಬ್‌ಗಳು ಸಾಕಷ್ಟು ಪ್ರಬಲವಾಗಿದ್ದವು ಮತ್ತು ಅದನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ನಿಯಮಿತ ಮತ್ತು ಗುತ್ತಿಗೆ ಆಧಾರದ ಮೇಲೆ ಕಾರ್ಮಿಕರನ್ನು ಹೊಂದಿದ್ದ ಖಾಸಗಿ ಸಿಮೆಂಟ್ ಕಾರ್ಖಾನೆ ಇತ್ತೀಚೆಗೆ ಕೋವಿಡ್ -19 ಸಾಂಕ್ರಾಮಿಕ ನಿರ್ಬಂಧಗಳಿಂದಾಗಿ ಕನಿಷ್ಠ ಕಾರ್ಯಪಡೆಯೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ರಾಜ್ಯ ಸರ್ಕಾರದ ಸೂಚನೆಗಳನ್ನು ಅನುಸರಿಸಿ ಕೆಲ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಿತ್ತು.
ಕೆಲಸದಿಂದ ತೆಗೆದುಹಾಕಿದ ಕಾರ್ಮಿಕರಿಗೆ 50 ಲಕ್ಷ ರೂ.ಗಳನ್ನು ಪಾವತಿಸುವಂತೆ ಒತ್ತಾಯಿಸಿ ಕಾರ್ಖಾನೆಯ ಅಧಿಕಾರಿಗಳಿಗೆ ದೂರವಾಣಿ ಕರೆ ಬಂದಿದ್ದು, ಅಪರಿಚಿತರು ಕರೆ ಮಾಡಿ ಬೇಡಿಕೆ ಈಡೇರದಿದ್ದರೆ ಕಾರ್ಖಾನೆಯ ಐದು ಸ್ಥಳಗಳಲ್ಲಿ ಬಾಂಬ್‌ಗಳನ್ನು ಹಾಕುವುದಾಗಿ ಬೆದರಿಕೆ ಹಾಕಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಂಗಳವಾರ ರಾತ್ರಿ, ಬಾಂಬ್ ಸ್ಕ್ವಾಡ್ ಸಿಬ್ಬಂದಿ ಬಂದು ಎರಡು ಪೈಪ್ ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಿ ವಶಪಡಿಸಿಕೊಂಡಿದ್ದಾರೆ. ವಜಾ ಮಾಡಿದ ನೌಕರರು ಸ್ಫೋಟಕಗಳನ್ನು ಇಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ತನಿಖೆ ನಡೆಯುತ್ತಿದೆ.
ಅಪರಿಚಿತ ವ್ಯಕ್ತಿಗಳ ವಿರುದ್ಧದ ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಖಾನೆಯ ನೌಕರರಿಗೆ ಮನೆಯಲ್ಲೇ ಇರಲು ತಿಳಿಸಲಾಗಿದೆ.