ಬೆಂಗಳೂರು: ನರೇಂದ್ರ ಮೋದಿಯವರು ತಮ್ಮ 5 ವರ್ಷಗಳ ವೈಫಲ್ಯವನ್ನು ಅಯೋಧ್ಯೆಯ ಪುಣ್ಯಭೂಮಿಯಲ್ಲಿ ಹೂತಿಟ್ಟು, ಅಲ್ಲಿ ನೆಮ್ಮದಿಯಾಗಿದ್ದ ರಾಮನನ್ನು ಕರೆದುಕೊಂಡು ಚುನಾವಣಾ ಪ್ರಚಾರಕ್ಕೆ ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಮಹದೇವಪುರ ಕ್ಷೇತ್ರದ ಆವಲಹಳ್ಳಿ ಮುನೇಶ್ವರ ದೇವಾಲಯದ ಆವರಣದಲ್ಲಿ ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ರಿಜ್ವಾನ್ ಪರ ಮತ ಭೇಟೆಗೆ ಕಾಂಗ್ರೆಸ್‌ನ ಪ್ರಮುಖ ನಾಯಕರು ಅಖಾಡಕ್ಕೆ ಧುಮಿಕಿದ್ದರು. ಇಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ 5 ವರ್ಷದ ಆಡಳಿತ ವೈಫಲ್ಯವನ್ನು ಟೀಕಿಸಿ ಬಿಜೆಪಿಯನ್ನ ಕುಟುಕಿದರು.
ಬಿಜೆಪಿ ಅಭ್ಯರ್ಥಿಗಳು ನನ್ನ ಮುಖ ನೋಡಿ ಮತ ಹಾಕಬೇಡಿ ಮೋದಿ ಮುಖ ನೋಡಿ ಮತಹಾಕಿ ಅಂತಾರೆ, ಅಂದರೆ ಅವರು ಕ್ಷೇತ್ರದಲ್ಲಿ ಯಾವುದೇ ಕೆಲಸ ಮಾಡಿಲ್ಲ ಅದಕ್ಕಾಗಿ ಮೋದಿ ನೋಡಿ ಮತ ಹಾಕಿ ಎಂದು ಕೇಳುತ್ತಾರೆಂದು ಬಿಜೆಪಿಯವರ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ, ನರೇಂದ್ರ ಮೋದಿ ಅವರೇ, ಇನ್ನೆಷ್ಟು ಕಾಲ ಜನರ ಭಾವನೆಗಳನ್ನೇ ಬಂಡವಾಳ ಮಾಡಿಕೊಂಡು ಮೋಸ ಮಾಡುತ್ತೀರಾ? 5 ವರ್ಷದಲ್ಲಿ ಒಮ್ಮೆಯಾದರೂ ಮಂದಿರ ನೆನಪಾಗಿರಲಿಲ್ಲವೇ ಎಂದು ಪ್ರಶ್ನೆ ಮಾಡಿದರು.
ಮಹದೇವಪುರ ಕ್ಷೇತ್ರದ ಆವಲಹಳ್ಳಿಯಲ್ಲಿ ನಡೆದ ಕಾಂಗ್ರೇಸ್ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಮುಖಂಡರು ಮಾತು ಮುಂದುವರಿಸಿ ಬಿಜೆಪಿ ನಾಯಕರ ಹಾಗೂ ಬೆಂ.ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ವಿರುದ್ಧ ವಾಗ್ದಾಳಿ ನಡೆಸಿರು. ಕಳೆದ ಹತ್ತು ವರ್ಷಗಳಿಂದ ಸಂಸದ ಪಿ.ಸಿ.ಮೋಹನ್ ಮುಖವನ್ನು ಕ್ಷೇತ್ರದ ಜನರು ನೋಡಿಲ್ಲ. ಮೈತ್ರಿ ಅಭ್ಯರ್ಥಿ ರಿಜ್ವಾನ್ ರನ್ನು ಗೆಲ್ಲಿಸಿ ಲೋಕಸಭೆಗೆ ಕಳುಹಿಸುವ ಮೂಲಕ ಪಿ.ಸಿ.ಮೋಹನ್ ರನ್ನು ಮನೆಗೆ ಕಳುಹಿಸಿ. ಲೋಕಸಭಾ ಸದಸ್ಯರಾಗುವುದಕ್ಕೆ ಮೋಹನ್ ಲಾಯಕ್ಕಿಲ್ಲ. ಸುಳ್ಳು ಹೇಳುವುದರಲ್ಲಿ ಬಿಜೆಪಿಯವರು ನಿಸ್ಸೀಮರು, ನರೇಂದ್ರ ಮೋದಿಯಷ್ಟು ಸುಳ್ಳು ಹೇಳಿದ ಪ್ರಧಾನಿ ಇದುವರೆಗೂ ನೋಡಿಲ್ಲ. ಮನ್ ಕಿ ಬಾತ್ ನಿಂದ ಹೊಟ್ಟೆ ತುಂಬುತ್ತಾ, ಕಾಮ್ ಕಿ ಬಾತ್ ಮಾಡಿ, ಅಚ್ಚೇದಿನ್ ಅಂದ್ರು, ಅಂಬಾನಿ, ನೀರವ್ ಮೋದಿಗೆ ಮಾತ್ರ ಅಚ್ಚೇದಿನ್ ಬಂದಿದೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯ ಜೊತೆ ಶಾಸಕರಾದ ಬೈರತಿ ಬಸವರಾಜ್, ಸುರೇಶ್ ಅಭ್ಯರ್ಥಿ ರಿಜ್ವಾನ್ ಪರ ಭರ್ಜರಿ ಪ್ರಚಾರ ನಡೆಸಿದರು. ಈ ಸಲ ನಿಮ್ಮ ಮನೆ ಮಗ ಎಂದು ತಿಳಿದು ನನಗೆ ಮತ ನೀಡಿ, ನಾನು ಗೆದ್ದ ಮೇಲೆ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಿ ನಿಮ್ಮೊಂದಿಗೆ ನನ್ನ ಕೊನೆ ಜೀವ ಇರುವವರಿಗೆ ಇದ್ದು ನಿಮ್ಮ ಋಣ ತಿರುಸುತೇನೆ ಎಂದು ರಿಜ್ವಾನ್ ಭಾವುಕರಾಗಿ ಹೇಳಿದರು.