ಬೆಂಗಳೂರು :ರಾಜ್ಯದಲ್ಲಿ ಲಾಕ್ಡೌನ್ ಇನ್ನೂ ಸ್ವಲ್ಪ ದಿನ ಮುಂದುವರೆಸುವ ಅಗತ್ಯ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪದ್ಮನಾಭನಗರದ ದೇವೇಗೌಡರ ನಿವಾಸದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೊರೊನಾದಿಂದ ಸಾವು ಇನ್ನೂ ನಿಂತಿಲ್ಲ. ಕೊರೊನಾ ಕೇಸ್ಗಳು ಕಡಿಮೆ ಆಗಿದೆ ಅಂತ ಲಾಕ್ಡೌನ್ ಹಿಂಪಡೆದರೆ ಅಪಾಯ ಗ್ಯಾರಂಟಿ ಎಂದು ಎಚ್ಚರಿಕೆ ನೀಡಿದರು.
ಮೊದಲ ಹಂತದ ಪ್ಯಾಕೇಜ್ ಘೋಷಣೆ ತಲುಪಬೇಕಾದವರಿಗೆ ತಲುಪುವ ನಂಬಿಕೆ ಇಲ್ಲ. ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ಇಲ್ಲ. ಜನತೆ ಸರ್ಕಾರದ ಖಜಾನೆಗೆ ಹಣ ಕೊಡುತ್ತಿದ್ದಾರೆ. ಅವರಿಗೆ ಇಷ್ಟು ಸಣ್ಣ ಪ್ರಮಾಣದ ಪ್ಯಾಕೇಜ್ ಸಾಕಾಗುವುದಿಲ್ಲ ಎಂದು ಅವರು ಹೇಳಿದರು.
ರಸ್ತೆ ಮತ್ತಿತರ ಕಾಮಗಾರಿಗಳಿಗೆ ಗುತ್ತಿಗೆದಾರರಿಗೆ ಕಿಕ್ಬ್ಯಾಕ್ ಪಡೆದು ಅವಕಾಶ ಕೊಡ್ತಿದೀರಾ, ಅವುಗಳನ್ನು ನಿಲ್ಲಿಸಿ, ಜನರ ಸಂಕಷ್ಟಕ್ಕೆ ನೆರವಾಗಿ ಎಂದು ಸರ್ಕಾರದ ಮೇಲೆ ಹೆಚ್ಡಿಕೆ ಗಂಭೀರ ಆರೋಪ ಮಾಡಿದರು.
ಕೂಲಿ ಕಾರ್ಮಿಕರಿಗೆ, ನೇಕಾರರಿಗೆ, ಮೀನುಗಾರರಿಗೆ ಕನಿಷ್ಠ ₹15 ಸಾವಿರ ಪ್ಯಾಕೇಜ್ ಘೋಷಣೆ ಮಾಡಿ. ಕೊರೊನಾ, ಬ್ಲಾಕ್ ಫಂಗಸ್ ಮತ್ತಿತರ ಕಾಯಿಲೆಗಳಿಗೆ ಸೌಕರ್ಯಗಳನ್ನು ಒದಗಿಸುವ ವಿಚಾರದಲ್ಲಿ ಹಣ ಹೊಡೆಯುವ ಕೆಲಸ ಮಾಡಬೇಡಿ ಎಂದರು.
ನಾಯಕತ್ವ ಬದಲಾವಣೆ ವಿಚಾರದಲ್ಲಿ ನಡೆಯುತ್ತಿರುವ ಚರ್ಚೆಗಳಿಗೆ ಈ ನಾಯಕರೇ ಕಾರಣ. ಯಾರು ನಾಯಕರಾದರೆ ನಮಗೇನು? ನಮಗೆ ಬೇಕಾಗಿರುವುದು ಜನರಿಗೆ ಒಳ್ಳೆಯ ಸರ್ಕಾರ ಅಷ್ಟೇ. ಮೂರು ಪಕ್ಷಗಳ ಸರ್ಕಾರ ಅಂದವರೇ ತಾನೇ ಈ ಸರ್ಕಾರ ತಂದಿದ್ದು. ಇವತ್ತು ಅವರು ತೋಡಿದ್ದ ಬಾವಿಯಲ್ಲಿ ಅವರೇ ಬಿದ್ದಿದ್ದಾರೆ ಅಷ್ಟೇ ಎಂದು ಅವರು ಟೀಕಿಸಿದರು.