ಕಲಬುರಗಿ: ತಾಯಿಯ ಚಿಕಿತ್ಸೆಗಾಗಿ ಹಣವಿಲ್ಲದೇ ಪರದಾಡುತ್ತಿರುವ ಬಗ್ಗೆ ಈಟಿವಿ ಭಾರತದಲ್ಲಿ ಬಿತ್ತರಗೊಂಡ ಸುದ್ದಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ದಾನಿಗಳಿಂದ ಸಹಾಯದ ಮಹಾಪೂರವೇ ಹರಿದುಬರುತ್ತಿದೆ.
"ಪತ್ನಿಗೆ ಬೆಂಕಿಯಿಟ್ಟು ಪ್ರಾಣಬಿಟ್ಟ ಪತಿ: ಅಮ್ಮನನ್ನು ಬದುಕಿಸಿಕೊಡುವಂತೆ ಅಂಗಲಾಚುತ್ತಿರುವ ಮಗ" ಎಂಬ ಶೀರ್ಷಿಕೆಯಲ್ಲಿ ನಿನ್ನೆ ಈಟಿವಿ ಭಾರತದಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಅನೇಕ ಹೃದಯವಂತ ದಾನಿಗಳು ಸಹಾಯದ ಹಸ್ತ ಚಾಚಿದ್ದಾರೆ. ಮಾಜಿ ಎಂಎಲ್‌ಸಿ ಅಲ್ಲಮಪ್ರಭು ಪಾಟೀಲ್ ಸ್ವತಃ ಆಸ್ಪತ್ರೆಗೆ ಭೇಟಿ ನೀಡಿ ಹತ್ತು ಸಾವಿರ ರೂಪಾಯಿ ಧನ ಸಹಾಯ ಮಾಡಿದ್ದಾರೆ. ಅಲ್ಲದೇ ಮುಂದಿನ ಚಿಕಿತ್ಸೆಗೆ ಕಡಿಮೆ ವೆಚ್ಚ ತಗಲುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಾದಾಗಿ ಹೇಳಿದ್ದಾರೆ. ಇದಲ್ಲದೇ ಅನೇಕ ದಾನಿಗಳು ಸಹ ತಮ್ಮಿಂದಾದ ಧನ ಸಹಾಯ ಮಾಡುವ ಮೂಲಕ ಕಷ್ಟದ ಸುಳಿಯಲ್ಲಿ ಸಿಲುಕಿದ ಬಾಲಕನ ಬೆನ್ನಲುಬಾಗಿ ನಿಲ್ಲುತ್ತಿದ್ದಾರೆ.
ಮೂಲತಃ ಬೀದರ್ನ ಗುಂಪಾನಗರದ ನಿವಾಸಿ ಶಿವಲಿಂಗಯ್ಯಸ್ವಾಮಿ ಎಂಬಾತ ಐದು ತಿಂಗಳ ಹಿಂದೆ ತನ್ನ ಪತ್ನಿ ಧನಲಕ್ಷ್ಮಿಗೆ ಬೆಂಕಿ ಹಚ್ಚಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದ, ತೀವ್ರ ತರಹದ ಸುಟ್ಟುಗಾಯಗಳಾಗಿ ಸಾವು ಬದುಕಿನ ಮಧ್ಯೆ ಸೆಣಸಾಟ ನಡೆಸುತ್ತಿರುವ ಧನಲಕ್ಷ್ಮಿಗೆ ಆರಂಭದಲ್ಲಿ ಬೀದರ್ನ ಬ್ರೀಮ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಮೇ 29ರಂದು ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಬಿಲ್ ಕಟ್ಟಲು ಹಣವಿಲ್ಲದ ಕಾರಣ ಪರದಾಡುತ್ತಿದ್ದರು.
ಬಾಲಕನ ತಾಯಿ ಚಿಕಿತ್ಸೆಗೆ ದಾನಿಗಳಿಂದ ಹರಿದು ಬಂತು ನೆರವು ತನ್ನೆರಡು ಮಕ್ಕಳ ಭವಿಷ್ಯದ ದೃಷ್ಟಿಯಿಂದ ನನ್ನನ್ನು ಬದುಕಿಸಿ ಅಂತ ಹೆತ್ತ ಕರುಳು ಹಾಸಿಗೆಯಲ್ಲೇ ಕಣ್ಣೀರು ಹಾಕುತ್ತಿದ್ದಳು. ಇನ್ನೊಂದು ಕಡೆ ಬಾಲಕ ಚನ್ನಬಸ್ಸು ತನ್ನ ತಾಯಿ ಇಲ್ಲದಿದ್ದರೆ ನಾನು, ನನ್ನ ಸಹೋದರ ಇಬ್ಬರು ಅನಾಥರಾಗ್ತಿವಿ. ದಯವಿಟ್ಟು ನನ್ನ ಅಮ್ಮನನ್ನು ಬದುಕಿಸಲು ಸಹಾಯ ಮಾಡಿ ಎಂದು ಮನವಿ ಮಾಡಿದ್ದ. ಈ ಕುರಿತಾಗಿ ಈಟಿವಿ ಭಾರತದಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಸಹೃದಯಿಗಳು ಸಹಾಯಕ್ಕೆ ಮುಂದಾಗುತ್ತಿದ್ದಾರೆ.
ಸಹಾಯ ಮಾಡಲು ಬಯಸುವ ಸಹೃದಯಿಗಳು ಬಾಲಕನ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ: 9379379859-ಚೆನ್ನಬಸು