ಬುಡಕಟ್ಟು ಜನಾಂಗದ ರೈತರ ಸರ್ವತೋಮುಖ ಅಭಿವೃದ್ಧಿಗಾಗಿ ಸಂಘ ಸ್ಥಾಪನೆ: ಜಿ.ಕುಮಾರ್ ನಾಯಕ್ - Chikkamagalore Tribal Farmers
ಬುಡಕಟ್ಟು ಜನಾಂಗದ ರೈತರ ಸರ್ವತೋಮುಖ ಅಭಿವೃದ್ಧಿಗಾಗಿ ಅವರು ಬೆಳೆದ ಬೆಳೆಗಳ ಮೌಲ್ಯವರ್ಧನೆಗೆ ಬೆಂಬಲ ಬೆಲೆ ಹಾಗೂ ಸೇವೆ ಒದಗಿಸುವ ನಿಟ್ಟಿನಲ್ಲಿ ರೈತ ಉತ್ಪಾದಕರ ಸಂಘ ಸ್ಥಾಪಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಿ.ಕುಮಾರ್ ನಾಯಕ್ ಭರವಸೆ ನೀಡಿದರು.
ಚಿಕ್ಕಮಗಳೂರು:ಬುಡಕಟ್ಟು ಜನಾಂಗದ ರೈತರ ಸರ್ವತೋಮುಖ ಅಭಿವೃದ್ಧಿಗಾಗಿ ಅವರು ಬೆಳೆಯುವಂತಹ ಬೆಳೆಗಳು ಹಾಗೂ ಕಾಫಿ ಮತ್ತು ಕರಿಮೆಣಸಿನ ಮೌಲ್ಯವರ್ಧನೆಗೆ ಬೆಂಬಲ ಬೆಲೆ ಹಾಗೂ ಸೇವೆ ಒದಗಿಸುವ ನಿಟ್ಟಿನಲ್ಲಿ ರೈತ ಉತ್ಪಾದಕರ ಸಂಘ ಸ್ಥಾಪನೆ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಿ.ಕುಮಾರ್ ನಾಯಕ್ ಹೇಳಿದರು.
ಮೂಡಿಗೆರೆ ತಾಲೂಕಿನ ಕಳಸದಲ್ಲಿ ಕಾಫಿ ಮತ್ತು ಕರಿಮೆಣಸು ಬೆಳೆಯುವ ಬುಡಕಟ್ಟು ರೈತರಿಗಾಗಿ ಸಮಗ್ರ ಅಭಿವೃದ್ಧಿ ಕಾರ್ಯಕ್ರಮದಡಿ ನಿರ್ಮಿಸಲಾದ ನರ್ಸರಿ ಉದ್ಘಾಟಿಸಲಾಯಿತು.
ಅಲ್ಲದೆ ಪರಿಶಿಷ್ಟ ವರ್ಗಗಳ ಇಲಾಖೆಯ ಅನುದಾನದಿಂದ ಕಾಫಿ ಮಂಡಳಿ ಮೂಡಿಗೆರೆಯ ಬುಡಕಟ್ಟು ರೈತರ ಸರ್ವೋತೋಮುಖ ಅಭಿವೃದ್ಧಿಗೆ ವೈಜ್ಞಾನಿಕ ವಿಧಾನಗಳಿಂದ 20 ಸಾವಿರ ಕಾಫಿ ಸಸಿಗಳನ್ನು ಹೊಸದಾಗಿ ಸ್ಥಾಪಿತವಾದ ನರ್ಸರಿಯಲ್ಲಿ ಬೆಳಸಿ, 850 ಬುಡಕಟ್ಟು ರೈತರಿಗೆ ಉಚಿತವಾಗಿ ಒದಗಿಸುವ ಮೂಲಕ ಬೆಳೆಯುವ ವಿಧಾನ, ಪೋಷಿಸುವುದು, ಮಣ್ಣು ಪರೀಕ್ಷೆ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.
ಉತ್ಪಾದನೆಯಾದ ಕಾಫಿ ಮತ್ತು ಕರಿಮೆಣಸಿನ ಮೌಲ್ಯವರ್ಧನೆಗೆ ಬೆಂಬಲ ಬೆಲೆ ಹಾಗೂ ಸೇವೆ ಒದಗಿಸುವ ನಿಟ್ಟಿನಲ್ಲಿ ರೈತ ಉತ್ಪಾದಕರ ಸಂಘವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕಾಫಿ ಜೊತೆಗೆ ನಿಂಬೂ, ಲವಂಗ, ತೆಂಗು ಬೆಳೆಗಳನ್ನು ಉಪ ಬೆಳೆಗಳನ್ನಾಗಿ ಬೆಳೆಸುವಂತೆ ಸಂಘದ ಸದಸ್ಯರಿಗೆ ತಿಳಿಸಲಾಯಿತು.
ಇದೇ ಸಂದರ್ಭದಲ್ಲಿ 550 ರೈತರ ಜಮೀನಿನ ಮಣ್ಣಿನ ಪರೀಕ್ಷೆ ನಡೆಸಿದ್ದು, ಸಾಂಕೇತಿಕವಾಗಿ 10 ರೈತರಿಗೆ ಮಣ್ಣು ಆರೋಗ್ಯ ಕಾರ್ಡ್‌ಗಳನ್ನು ವಿತರಿಸಿ ಬುಡಕಟ್ಟು ರೈತರೊಂದಿಗೆ ಶಿಕ್ಷಣ ಜೀವನೋಪಾಯದ ಸ್ಥಿತಿಗತಿ ಕುರಿತು ಚರ್ಚಿಸಿದರು.