ಬೆಂಗಳೂರು:ಏಪ್ರಿಲ್ 24ರಂದು ರಾಜ್ಯಾದ್ಯಂತ ವರನಟ, ಕನ್ನಡಿಗರ ಕಣ್ಮಣಿ ಡಾ.ರಾಜ್‍ಕುಮಾರ್ ಅವರ ಹುಟ್ಟುಹಬ್ಬವನ್ನು ಸಂಭ್ರಮ ಸಡಗರದಿಂದ ರಾಜ್ಯದ ವಿವಿಧೆಡೆ ಅಭಿಮಾನಿಗಳು ವಿಶೇಷವಾಗಿ ಆಚರಿಸಿದ್ದಾರೆ.
ತುಮಕೂರಿನಲ್ಲಿ ಜಿಲ್ಲಾಡಳಿತದ ವತಿಯಿಂದ ಡಾ.ರಾಜಕುಮಾರ್ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಡಾ. ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು. ಈ ವೇಳೆ ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಮಾತನಾಡಿ, ಡಾಕ್ಟರ್ ರಾಜಕುಮಾರ್ ನಾಡು ಕಂಡ ಶ್ರೇಷ್ಠ ನಟ, ನಾಯಕ ಮತ್ತು ಖಳ ನಾಯಕನ ಪಾತ್ರ ಮಾಡುವುದಲ್ಲಿ ನಿಸ್ಸೀಮ. ಒಬ್ಬ ನಟ ಎಂದರೆ ಹೇಗಿರಬೇಕು ಎಂಬುದನ್ನು ತೋರಿಸಿಕೊಟ್ಟ ಶ್ರೇಷ್ಠ ವ್ಯಕ್ತಿ. ಕೇವಲ ಚಿತ್ರರಂಗದಲ್ಲಿ ಮಾತ್ರವಲ್ಲದೆ ತಮ್ಮ ಜೀವಿತಾವಧಿಯಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಬೇರೆಯವರಿಗೂ ಮಾದರಿ ಎನಿಸಿದರು ಎಂದು ರಾಜ್‍ಕುಮಾರ್ ಗುಣಗಾನ ಮಾಡಿದರು. ಅಪಾರ ಜಿಲ್ಲಾಧಿಕಾರಿ ಚನ್ನಬಸಪ್ಪ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿದ್ದರು.
ಹಾಗೆಯೇ ತುಮಕೂರಿನ ರಾಜ್‍ಕುಮಾರ್ ಅಭಿಮಾನಿ ಹೊರಪೇಟೆ ಹರಳೂರು ಕುಮಾರ್ ಅವರು, ರಾಜ್ ಹೆಸರಿನಲ್ಲಿ ಅನ್ನಸಂತರ್ಪಣೆ ಮಾಡುವ ಮೂಲಕ ಆಚರಿಸಿದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಂಸದ ಜಿ. ಎಸ್. ಬಸವರಾಜು ರಾಜ್ ಕುಮಾರ್ ನಮಗೆಲ್ಲ ದಾರಿದೀಪ, ಸರಳ ಸಜ್ಜನಿಕೆಗೆ ಹೆಸರಾಗಿದ್ದವರು. ಅವರ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಹೆಮ್ಮೆಯ ವಿಚಾರ ಎಂದು ತಿಳಿಸಿದರು.
ಸಕ್ಕರೆ ನಗರಿ ಮಂಡ್ಯ ಜಿಲ್ಲೆಯೆಲ್ಲೆಡೆ ಡಾ. ರಾಜಕುಮಾರ್ ಅವರ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು. ಕನ್ನಡ ಪರ ಸಂಘಟನೆಗಳು, ಜಿಲ್ಲಾಡಳಿತ ಹಾಗೂ ಅಭಿಮಾನಿಗಳು ನಗರದಲ್ಲಿ ಸಿಹಿ ಹಂಚಿದರು. ಇನ್ನು ಕನ್ನಡ ಪರ ಸಂಘಟನೆಗಳು ನಗರದ ಕೆ ಆರ್ ವೃತ್ತ ದಲ್ಲಿರುವ ಡಾ. ರಾಜ್ ಪುತ್ಥಳಿಗೆ ಹೂ ಮಾಲೆ ಹಾಕುವ ಮೂಲಕ ಗೌರವ ಸಲ್ಲಿಸಿದರು. ಜಯ ಕರ್ನಾಟಕ, ರಕ್ಷಣಾ ವೇದಿಕೆ, ಕಾರ್ಮಿಕರ ವೇದಿಕೆ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಹುಟ್ಟುಹಬ್ಬ ಆಚರಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಮಂಡ್ಯ ಜಿಲ್ಲಾಡಳಿತದ ವತಿಯಿಂದ ಡಾ. ರಾಜಕುಮಾರ್ ಅವರ ಹುಟ್ಟು ಹಬ್ಬವನ್ನು ಸರಳವಾಗಿ ಆಚರಣೆ ಮಾಡಲಾಯಿತು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರಾಜ್ ರವರ ಫೋಟೋಗೆ ಗೌರವ ಸಲ್ಲಿಸಲಾಯಿತು.
ಕೋಟೆನಾಡು ಚಿತ್ರದುರ್ಗದಲ್ಲೂ ಜಿಲ್ಲಾಡಳಿತದ ವತಿಯಿಂದ ಕರ್ನಾಟಕದ ನಟ ಸಾರ್ವಭೌಮ ಡಾ, ರಾಜಕುಮಾರ್ ಜಯಂತಿಯನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಜ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜಿಲ್ಲಾಧಿಕಾರಿ ವಿನೋತ್ ಪ್ರಿಯಾರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ವೇಳೆ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕಧಿಕಾರಿ ಸತ್ಯಭಾಮರವರು ಕೂಡ ಪುಷ್ಪಾರ್ಚನೆ ಮಾಡಿ ಅವರ ಚಿತ್ರಗಳ ಸರಮಾಲೆಯನ್ನು ನೆನಪಿಸಿದರು. ಇದೇ ಸಮಯದಲ್ಲಿ ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯ ಸಿಬ್ಬಂದಿ ಮತ್ತಿತರರು ಭಾಗಿಯಾಗಿದ್ದರು.
ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲೂ ವರನಟನ ಹುಟ್ಟುಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಜಿಲ್ಲಾಡಳಿತ ಹಾಗೂ ವಾರ್ತಾ ಮತ್ತು ಸಂಪರ್ಕ ಇಲಾಖೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೇರು ನಟನ ಭಾವಚಿತ್ರಕ್ಕೆ ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ವಿ.ಎಂ. ಹೆಗಡೆ ಪುಷ್ಪನಮನ ಸಲ್ಲಿಸಿದರು. ರಾಜ್‍ಕುಮಾರ್ ಹುಟ್ಟುಹಬ್ಬವನ್ನು ರಾಜ್ಯ ಸರ್ಕಾರ ಕಳೆದ ವರ್ಷದಿಂದ ಅಧಿಕೃತವಾಗಿ ಸರ್ಕಾರಿ ಕಾರ್ಯಕ್ರಮವನ್ನಾಗಿ ಮಾಡಿದ್ದು, ಜಿಲ್ಲಾಡಳಿತವು ಇಂದು ಎರಡನೇ ವರ್ಷದ ಜಯಂತಿಯನ್ನು ಚುನಾವಣಾ ಪ್ರಕ್ರಿಯೆ ನಡುವೆಯೂ ಸರಳವಾಗಿ ಆಚರಿಸಿತು. ಈ ವೇಳೆ ಸಮಾಜ ಕಲ್ಯಾಣ ಇಲಾಖೆ ಪುರುಷೋತ್ತಮ, ವಾರ್ತಾ ಮತ್ತು ಸಂಪರ್ಕ ಇಲಾಖೆ ಹಿಮಂತರಾಜು ಇದ್ದರು.
ಹುಬ್ಬಳ್ಳಿಯಲ್ಲಿ ಆಟೋ ಚಾಲಕರು ಹಾಗೂ ಮಾಲೀಕರು ಡಾ. ರಾಜಕುಮಾರ ಅವರ 91 ನೇ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಣೆ ಮಾಡಿದರು. ನಗರದ ಚನ್ನಮ್ಮ ವೃತ್ತದಲ್ಲಿ ವರನಟ ರಾಜ್‍ಕುಮಾರ ಪರ ಘೋಷಣೆ ಕೂಗಿದರು.