ಬೆಂಗಳೂರು: ಎರಡು ದಿನಗಳ ಹಿಂದಷ್ಟೇ ಬೆಡ್ ಬ್ಲಾಕಿಂಗ್ ದಂಧೆ ಬಯಲಿಗೆಳೆದಿದ್ದ ಸಂಸದ ತೇಜಸ್ವಿ ಸೂರ್ಯ ಕಾರ್ಯವನ್ನು ಶ್ಲಾಘಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದು ಅದೇ ವಿಚಾರವಾಗಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗೋಷ್ಟಿ ನಡೆಸಿದ ಅವರು, ಸಂಸದ ತೇಜಸ್ವಿ ಸೂರ್ಯ ವಿಚಾರದಲ್ಲಿ ಯುಟರ್ನ್ ಹೊಡೆದಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಮತ್ತು ಮೂವರು ಶಾಸಕರು ಸೇರಿ ಬೆಡ್ ಬ್ಲಾಕಿಂಗ್ ಬಗ್ಗೆ ಮಾತನಾಡಿದ್ರು. ಅಲ್ಲಿ 200 ಜನ ಕೆಲಸ ಮಾಡ್ತಾಯಿದ್ರೂ, ಕೇವಲ 17 ಜನರ ಹೆಸರನ್ನು ಮಾತ್ರ ಹೇಳ್ತಾರೆ. ಮಿಕ್ಕಿದವರ ಹೆಸರನ್ನು ಹೇಳೊಕ್ಕೆ ಹೋಗಿಲ್ಲ. ಅವನು ಯಾರೋ ಎಳಸು ತಂದು ಕೂರಿಸಿಕೊಂಡಿದ್ದೀರಾ ಯಡಿಯೂರಪ್ಪ ಎಂದು ಪ್ರಶ್ನಿಸಿದರು.
ಹಿಂದೆ ಅವನು ಮುಸ್ಲಿಂರು ಪಂಚರ್ ಹಾಕ್ತಾರೆ ಅಂತ ಹೇಳ್ದ. ಅಷ್ಟೇ ಅಲ್ಲದೆ, ಬೆಂಗಳೂರು ಭಯೋತ್ಪಾದಕರ ಹಬ್ ಆಗಿದೆ ಎಂದಿದ್ದ. ಏನೋ ವಿದ್ಯಾವಂತ ಅನ್ಕೊಂಡಿದ್ದೆ. ಮತ್ತೆ ಹಳೆಯ ಚಾಳಿಯನ್ನು ಮುಂದುವರಿಸಿದ್ದಾರೆ ಎಂದು ಡಿಕೆಶಿ ಗುಡುಗಿದರು.
ಒನ್ ಟೈಮ್ ಕ್ರಾಪ್ ಅವನು:ಸಂಸದ ತೇಜಸ್ವಿ ಸೂರ್ಯ ಬರೀ ಒಂದು ಕೋಮಿನವರ ಹೆಸರುಗಳನ್ನು ಓದುತ್ತಾನೆ. ಅವರು ನನ್ನ ಬ್ರದರ್ಸ್. ಅವರ ಜೊತೆ ನಾವು ಜೀವಿಸುತ್ತೇವೆ, ಸಾಯುತ್ತೇವೆ. ಅವರು ಮಾಂಸ ಕಡಿಲಿಲ್ಲ ಅಂದ್ರೆ ಮಾಂಸ ತಿನ್ನಲ್ಲ. ಅವರು ಪಂಚರ್ ಹಾಕಿಲ್ಲ ಅಂದ್ರೆ ಗಾಡಿ ಮುಂದಕ್ಕೆ ಹೋಗಲ್ಲ. ತೇಜಸ್ವಿ ಸೂರ್ಯ ಅವರ ಮನೆಯವರು ಗಾಡಿ ರಿಪೇರಿ ಮಾಡಿಸಿಲ್ಲವಾ? ಮೊದಲು ಎಂಪಿಯನ್ನ ಬಂಧಿಸಬೇಕು. ಇದಕ್ಕೆ ಕೋಮು ಆಯಾಮ ನೀಡ್ತಾ ಇದಾರೆ ಅವರು. ಅಮವಾಸ್ಯೆ ಗಿರಾಕಿ ಅವನು. ಒನ್ ಟೈಮ್ ಕ್ರಾಪ್ ಅವನು ಅಂತ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಸಂಸದ ತೇಜಸ್ವಿ ಸೂರ್ಯ ವಿರುದ್ಧ ಡಿಕೆಶಿ ಗುಡುಗು ಇದನ್ನೂ ಓದಿ -ಸರ್ಕಾರಿ ಕೋಟಾದ ಬೆಡ್ಗಳ ದುರುಪಯೋಗ.. ಬೆಡ್ ಬುಕ್ಕಿಂಗ್ ದಂಧೆ ಬಹಿರಂಗಪಡಿಸಿದ ಸಂಸದ ತೇಜಸ್ವಿ ಸೂರ್ಯ
ಸಿಎಂಗೆ ಸಲಹೆ:ಮುಖ್ಯಮಂತ್ರಿಗಳೇ ನಿಮ್ಮ ಶ್ರಮದ ಬಗ್ಗೆ ನಮಗೆ ಅನುಮಾನ ಇಲ್ಲ. ಆದರೆ ನಿಮ್ಮ ಹತ್ತಿರ ಕೆಲಸ ಮಾಡಲು ಆಗುತ್ತಿಲ್ಲ. ನಾನು ವೈದ್ಯಕೀಯ ಶಿಕ್ಷಣ ಸಚಿವ ಆಗಿದ್ದೆ. 56 ಮೆಡಿಕಲ್ ಕಾಲೇಜುಗಳಿವೆ. ಅವರನ್ನ ಕರೆದ ಮಾತನಾಡಿ. ಒಬ್ಬೊಬ್ಬರ ಬಳಿ 700 ಬೆಡ್ ಇವೆ. ಖಾಸಗಿ ಆಸ್ಪತ್ರೆಗೆ ಹೋದವರು ಬದುಕಿ ಬರ್ತಾ ಇದಾರೆ. ಸಿಎಂ ಗೆ ಕೈ ಮುಗಿದು ಕೇಳ್ತಿನಿ. ಬಡವರ ಜೀವ ಉಳಿಸಿ ಎಂದರು.
ಯಾರು ಕಮ್ಯೂನಲ್ ಆ್ಯಂಗಲ್ ಕೊಡುತ್ತಿದ್ದಾರೋ ಅವರನ್ನು ಬಂಧಿಸಬೇಕು. ಸಚಿವ ಆರ್. ಅಶೋಕ್ ಉತ್ತರ ಕೊಡದೆ ಓಡಿ ಹೋಗುತ್ತಿದ್ದಾರೆ. ಉಳಿದ ಸಚಿವರು ಏನು ಮಾಡುತ್ತಿದ್ದಾರೆ? ಬಿಜೆಪಿ ಅಜೆಂಡಾ ಬರೀ ಗುಳುಂ, ಗುಳುಂ. ಇದೇ ಕೊನೆ ಅವಕಾಶ ಅಂತ ಏನು ಸಿಗ್ತೋ ಎಲ್ಲ ಗುಳುಂ ಎಂದು ಡಿಕೆಶಿ ವ್ಯಂಗ್ಯವಾಡಿದರು.
ಸಂಸದ ತೇಜಸ್ವಿ ಸೂರ್ಯ ವಿರುದ್ಧ ಡಿಕೆಶಿ ಗುಡುಗು ವಿಷಯಾಂತರ ಪ್ರಯತ್ನ:ಚಾಮರಾಜನಗರ ವಿಚಾರ ಮರೆಮಾಚಿ ಬೇರೆ ವಿಚಾರದತ್ತ ಜನರ ಮನಸ್ಸನ್ನು ಹೊರಳಿಸಲು ಇಂತಹ ಬೆಡ್ ಬ್ಲಾಕಿಂಗ್ ವಿಚಾರ ತಂದಿದ್ದಾರೆ. ಅದನ್ನೇ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ನಾನು ಅದನ್ನೇ ಹೇಳುವುದು ಎಂದರು.
ಸಚಿವ ಸುಧಾಕರ್ಗೆ ಜವಾಬ್ದಾರಿ ಹಂಚಿಕೆ ಮಾಡದ ವಿಚಾರ ಸರ್ಕಾರದ ಸಂಪೂರ್ಣ ವೈಫಲ್ಯಕ್ಕೆ ಉದಾಹರಣೆ. ಇನ್ನೂ ಬೆಡ್ ಸಿಗದೆ ಇದ್ರೆ ರೋಗಿಗಳಿಗೆ ಮಂತ್ರಿಗಳ ವಿಳಾಸ ಹಂಚಿಕೆ ಮಾಡಬೇಕಾಗುತ್ತೆ. ಜನರು ಅವರ ಮನೆ ಬಳಿ ಹೋಗಲಿ ಎಂದು ಹೇಳಿದರು.
ಈಗ ಈ ಕೇಸನ್ನ ಸಂದೀಪ್ ಪಾಟೀಲ್ ಗೆ ನೀಡಿದ್ದಾರೆ. ನನಗೆ ಸಂದೀಪ್ ಪಾಟೀಲ್ ಸೇರಿ ಯಾರ ಮೇಲೂ ನಂಬಿಕೆ ಇಲ್ಲ. ಮುಖರ್ಜಿ ಮೇಲೂ ಇಲ್ಲ, ಅನುಚೇತ್ ಮೇಲೂ ಇಲ್ಲ. ಬೆಳಗಾವಿ ಕೇಸ್ ಆಗಿ ಒಂದೂವರೆ ತಿಂಗಳಾಯ್ತು. ಏನ್ ಮಾಡ್ತಾ ಇದ್ದಿರಿ? ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಕೇಸ್ ನ್ನು ಡಿಕೆಶಿ ಇದೇ ಸಂದರ್ಭದಲ್ಲಿ ಪ್ರಸ್ತಾಪಿಸಿದರು.