ಬೆಂಗಳೂರು:ಜನಸಾಮಾನ್ಯರು ಕೊರೊನಾ, ಬ್ಲ್ಯಾಕ್ ಫಂಗಸ್, ಬೆಲೆ ಏರಿಕೆಯಂತಹ ಸಮಸ್ಯೆಗಳಿಂದ ಸಾಯುತ್ತಿರುವಾಗ ಬಿಜೆಪಿ ನಾಯಕರು ಅಧಿಕಾರದ ಆಸೆಗೆ ಚೆಲ್ಲಾಟವಾಡುತ್ತಿದ್ದಾರೆ. ಜನ ಕೊಟ್ಟಿರುವ ಅಧಿಕಾರವನ್ನು ಸಾಧ್ಯವಾದರೆ ನಡೆಸಲಿ, ಇಲ್ಲವೇ ಅಧಿಕಾರಿಗಳಿಗೆ ಜವಾಬ್ದಾರಿ ನೀಡಿ ಕೆಳಗಿಳಿಯಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಗುಡುಗಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳ ಜತೆಗೆ ಮಾತನಾಡಿ, 'ನನಗೆ ಬಂದಿರುವ ಮಾಹಿತಿ ಪ್ರಕಾರ ಕೆಲವು ಸಚಿವರು 14-15 ಮಠಗಳಿಗೆ ಭೇಟಿ ನೀಡಿದ್ದಾರೆ. ಯಾವ ಸಚಿವರು ಯಾವ ಮಠಕ್ಕೆ ಬಂದಿದ್ದಾರೆ, ಯಾವ ಸಚಿವರು ಲ್ಯಾಪ್ ಟಾಪ್ ಸಮೇತ ಬಂದಿದ್ದರು ಎಂದು ನನಗೆ ನಮ್ಮ ಕಾರ್ಯಕರ್ತರೇ ಕರೆ ಮಾಡಿ ಮಾಹಿತಿ ಕೊಟ್ಟಿದ್ದಾರೆ. ನಾನು ಕೂಡ ಈ ಮಾಹಿತಿ ಪರಿಶೀಲಿಸಿದ್ದು, ಮಠದವರೇ ಅವರಿಗೆ ಬುದ್ಧಿವಾದ ಹೇಳಲಿ, ಯಾವ ಬುದ್ಧಿಮಾತು ಹೇಳಬೇಕು ಎಂಬುದು ಅವರಿಗೆ ಬಿಟ್ಟದ್ದು, ಅದನ್ನು ಹೇಳುವುದು ನನ್ನ ಕೆಲಸವಲ್ಲ. ಈ ಮಧ್ಯೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರು 65 ಜನ ಶಾಸಕರು ಸಿಎಂ ಬೆಂಬಲ ಪತ್ರಕ್ಕೆ ಸಹಿ ಹಾಕಿರುವುದಾಗಿ ಹೇಳಿದ್ದಾರೆ. ಅವರಿಗೆ ಗೌರವ ಇರುವುದು ನಿಜವೇ, ಆದರೆ ಆ ಶಾಸಕರ ಪಟ್ಟಿ ಬಿಡುಗಡೆ ಮಾಡಲಿ. ಅನಂತರ ನಾವು ಮುಂದಿನ ಪ್ರತಿಕ್ರಿಯೆ ನೀಡುತ್ತೇವೆ ಎಂದರು.