ಬೆಂಗಳೂರು:ರಾಜ್ಯದಲ್ಲಿ ಕೊರೊನಾ ಚಿಕಿತ್ಸೆಗೆ ಅಗತ್ಯವಾದ ರೆಮ್ಡೆಸಿವಿರ್ ಚುಚ್ಚುಮದ್ದಿಗೆ ಅಭಾವ ಹೆಚ್ಚಾಗಿದೆ. ಆಸ್ಪತ್ರೆಗಳು ಇಂಜಕ್ಷನ್ ಪೂರೈಸಿ ಎಂದು ಗೋಗರೆದರೂ ಸರಬರಾಜು ಆಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ನಾಯಕರು, ಸಂಸದರಿಗೆ ಬಾಕ್ಸ್ ಗಟ್ಟಲೇ ಔಷಧ ಕೊಟ್ಟು ಕಳುಹಿಸಲಾಗುತ್ತಿದೆ. ಇದು ಹೇಗೆ ಸಾಧ್ಯ? ಇದು ಸರಿಯೇ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯದ ಸಾಮಾಜಿಕ ಜಾಲತಾಣ ಯೋಧರ ನೇಮಕ ಅಭಿಯಾನ ಹಾಗೂ ಕೊರೊನಾ ಸೋಂಕಿತರ ನೆರವಿಗೆ ಆ್ಯಂಬುಲೆನ್ಸ್ ಸೌಲಭ್ಯಕ್ಕೆ ಚಾಲನೆ ಕೊಟ್ಟ ನಂತರ ಮಾತನಾಡಿದ ಅವರು, ನನಗೆ ಛತ್ತೀಸಘಡ, ರಾಜಸ್ಥಾನ ಮುಖ್ಯಮಂತ್ರಿಗಳು ಕರೆ ಮಾಡಿ, ನಾವು ನಿಮ್ಮ ರಾಜ್ಯದ ಡಿಎಚ್ಒಗಳಿಗೆ ಔಷಧಿಗಳನ್ನು ಪೂರೈಸಲು ಅನುಮತಿ ನೀಡಿದ್ದರೂ, ರಾಜ್ಯ ಸರ್ಕಾರ ಅದನ್ನು ತಡೆ ಹಿಡಿದಿದೆ ಎಂದು ಹೇಳುತ್ತಿದ್ದಾರೆ. ನಾನು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಆರೋಗ್ಯ ಕಾರ್ಯದರ್ಶಿಗಳಿಗೆ ಕರೆ ಮಾಡಿ ಈ ವಿಚಾರದ ಬಗ್ಗೆ ಕೇಳಿದೆ. ಅವರು ಏನನ್ನೂ ಹೇಳದೇ ಈ ಸಮಸ್ಯೆ ಬಗೆಹರಿಸುತ್ತೇವೆ ಎಂದರು. ಆದರೆ, ಮತ್ತೊಂದು ಕಡೆ ಬಿಜೆಪಿ ನಾಯಕರುಗಳಿಗೆ ಈ ಔಷಧವನ್ನು ಡಬ್ಬಗಳಲ್ಲಿ ತುಂಬಿ, ತುಂಬಿ ಕಳುಹಿಸುತ್ತಿದ್ದಾರೆ ಎಂದರು.
ಬಿಜೆಪಿ ನಾಯಕರು, ಸಂಸದರು ಆಸ್ಪತ್ರೆಗಳ ಮಾಲೀಕರಾ? ಡ್ರಗ್ ಕಂಟ್ರೋಲರ್ಗಳಾ? ಔಷಧ ಪಡೆಯಲು ಪರವಾನಗಿ ಪಡೆದಿದ್ದಾರಾ? ಆ ನಾಯಕರು ಔಷಧ ತೆಗೆದುಕೊಂಡು ಜನರಿಗೆ ನೀಡುತ್ತಿರಬಹುದು, ಅದರ ಬಗ್ಗೆ ನಾನು ತಕರಾರು ಮಾಡುವುದಿಲ್ಲ. ಆದರೆ, ಯಾವ ಕಾನೂನಿನ ಅಡಿಯಲ್ಲಿ ಅವರು ದೊಡ್ಡ ಪ್ರಮಾಣದಲ್ಲಿ ಔಷಧವನ್ನು ಕೊಂಡೊಯ್ಯಲು ಅನುಮತಿ ನೀಡಲಾಯಿತು? ಯಡಿಯೂರಪ್ಪನವರೇ ನಿಮ್ಮ ಆಡಳಿತದಲ್ಲಿ ಏನೇನಾಗುತ್ತಿದೆ? ಪ್ರಧಾನಮಂತ್ರಿಗಳು, ಕೇಂದ್ರ ಆರೋಗ್ಯ ಸಚಿವರು ಈ ಬಗ್ಗೆ ಗಮನ ಹರಿಸಬೇಕಿದೆ. ಬಿಜೆಪಿ ನಾಯಕರು, ಸಂಸದರು ಈ ಔಷಧವನ್ನು ತೆಗೆದುಕೊಂಡು ಹೋಗಲು ಅನುಮತಿ ಕೊಟ್ಟಿದ್ದು ಯಾರು? ಇದು ದೇಶದ ಅತಿದೊಡ್ಡ ಅಪರಾಧ. ಯಾವುದೇ ಸಚಿವ, ಶಾಸಕ ತಮ್ಮ ಕಚೇರಿ ಪ್ರಭಾವ ಬಳಿಸಿ ಔಷಧ ಪಡೆಯುವಂತಿಲ್ಲ ಎಂದು ದೂರಿದರು.