ಬೆಂಗಳೂರು: ಎಕ್ಸ್ಪ್ರೆಸ್ ಕೆನಾಲ್ ಅಭಿವೃದ್ಧಿಪಡಿಸಿ ತುಮಕೂರು ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಹೇಮಾವತಿ ನೀರು ಹರಿಸಲು ಮನವಿ ಮಾಡಲಾಗಿದೆ. ಸರ್ಕಾರ ನಮ್ಮ ಮನವಿಗೆ ಸ್ಪಂದಿಸದಿದ್ದರೆ ಕಾನೂನು ಹೋರಾಟ ನಡೆಸುತ್ತೇವೆ ಎಂದು ಬಿಜೆಪಿ ಶಾಸಕ ಮಾಧುಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಹೇಮಾವತಿ ನೀರನ್ನು ತುಮಕೂರು ಜಿಲ್ಲೆಗೆ ಹರಿಸುವ ಹಾಗೂ ಜಿಲ್ಲೆಯ ನೀರಾವರಿ ಯೋಜನೆಗಳು ಸೇರಿದಂತೆ ಎತ್ತಿನಹೊಳೆ ಯೋಜನೆಯ ಭೂ ಸಂತ್ರಸ್ತರಿಗೆ ನಿಗದಿಪಡಿಸಿದ ಪರಿಹಾರದಲ್ಲಿ ಉಂಟಾಗಿರುವ ವ್ಯತ್ಯಾಸವನ್ನು ಸರಿಪಡಿಸುವ ಕುರಿತು ಬುಧವಾರ ವಿಧಾನಸೌಧದಲ್ಲಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಭಾಗವಹಿಸಿ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕ ಮಾಧುಸ್ವಾಮಿ, 240 ಕಿ.ಮೀ. ಕೆನಾಲ್ ಅಭಿವೃದ್ಧಿಪಡಿಸಿ ನೀರು ಹರಿಸಲು ಜಿಲ್ಲೆಯ ಎಲ್ಲ ಶಾಸಕರು ಒಕ್ಕೊರಲಿನಿಂದ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಸುಮಾರು 2000 ಕ್ಯೂಸೆಕ್ ನೀರನ್ನು ನಾಲೆಗೆ ಹರಿಸಬೇಕು. ಆದರೆ, ಕೇವಲ 70 ಕಿ.ಮೀ. ನಾಲೆ ದುರಸ್ತಿ ಮಾಡಲಾಗಿದೆ. ಕುಣಿಗಲ್, ಮಾಗಡಿ ಕಡೆ ಲಿಂಕ್ ಕೆನಾಲ್ ಮಾಡಿದ್ದಾರೆ. 300 ಕ್ಯೂಸೆಕ್ ನೀರನ್ನು ಹರಿಸುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿದ್ದಾರೆ. ಇದರಿಂದ ತುಮಕೂರು ಜಿಲ್ಲೆಯ ಗುಬ್ಬಿ, ತುರುವೇಕೆರೆ ತಾಲೂಕಿಗೆ ನೀರು ಬರುವುದಿಲ್ಲ ಎಂದು ತಿಳಿಸಿದರು.
ನಾಲೆ ಅಭಿವೃದ್ಧಿ ಮಾಡಿ 2000 ಕ್ಯೂಸೆಕ್ ನೀರು ಹರಿಸಬೇಕೆಂದು ಎಲ್ಲ ಶಾಸಕರು ತಮ್ಮ ಅಭಿಪ್ರಾಯಗಳನ್ನು ಸಭೆಯಲ್ಲಿ ವ್ಯಕ್ತಪಡಿಸಿದ್ದಾರೆ. ಲೋಕಸಭೆ ಚುನಾವಣೆಗೂ, ಇದಕ್ಕೂ ಯಾವುದೇ ಸಂಬಂಧವಿಲ್ಲ. ದಿಢೀರ್ನೆ ಕ್ಯಾಬಿನೆಟ್ನಲ್ಲಿ ವಿಷಯ ಪ್ರಸ್ತಾಪಿಸಿದ್ದಾರೆ. 70 ಕಿ.ಮೀ. ನಾಲೆಯನ್ನು ದುರಸ್ತಿ ಮಾಡಿದರೆ ಇನ್ನೂ 170 ಕಿ.ಮೀ. ನೀರು ಹರಿಯವುದಿಲ್ಲ ಎಂದು ಹೇಳಿದರು.