ಬೆಂಗಳೂರು : ರಾಜ್ಯದ ಎಲ್ಲೆಡೆ ಮುಂಗಾರು ಮಳೆ ಆರಂಭವಾಗಿದ್ದು, ಅದಕ್ಕೆ ತಕ್ಕಂತೆ ರಾಜ್ಯ ಕೃಷಿ ಇಲಾಖೆ ಈ ವರ್ಷದ ಮುಂಗಾರು ಹಂಗಾಮಿನಲ್ಲಿ 73 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಿದೆ.
ಅದಕ್ಕೆ ಅಗತ್ಯವಾದ 5.97 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜಗಳು ಹಾಗೂ 22.10 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಪೂರೈಕೆಗೆ ಕೃಷಿ ಇಲಾಖೆ ಯೋಜನೆ ರೂಪಿಸಿದೆ. ಮುಂಗಾರು ಪೂರ್ವದಲ್ಲಿ ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಕಾರ್ಯ ಆರಂಭವಾಗಿದೆ.
ರಾಜ್ಯದಲ್ಲಿ ಮುಂಗಾರು ಆರಂಭವಾಗುತ್ತಿದ್ದಂತೆ ಬಿತ್ತನೆ ಕಾರ್ಯ ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ರೈತರು ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕಾಗಿ ರೈತ ಸಂಪರ್ಕ ಕೇಂದ್ರಗಳಿಗೆ ಧಾವಿಸುತ್ತಿದ್ದಾರೆ. ರೈತರಿಗೆ ಕೊರೊನಾ ಸೋಂಕು ಹರಡದಂತೆ ತಪ್ಪಿಸಲು ಕೃಷಿ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ. ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಪೂರೈಕೆ ಮಾಡಲಾಗುತ್ತಿದೆ.
ಕೊರೊನಾ ಭೀತಿ -ತಾತ್ಕಾಲಿಕ ಕೇಂದ್ರ ತೆರೆಯಲು ಸೂಚನೆ
ಹುಬ್ಬಳ್ಳಿ-ಧಾರವಾಡ, ಹಾವೇರಿ, ಬೀದರ್, ದಾವಣಗೆರೆ ಬೆಳಗಾವಿ, ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರೈತರು ಪಹಣಿ ಹಿಡಿದುಕೊಂಡು ಹೆಚ್ಚು ಜನ ಬೀಜ, ರಸಗೊಬ್ಬರಕ್ಕಾಗಿ ಸೇರುತ್ತಿರುವುದರಿಂದ ನೂಕುನುಗ್ಗಲು ಉಂಟಾಗುತ್ತಿದೆ. ಸಾಮಾಜಿಕ ಅಂತರವಿಲ್ಲದೆ ಸರತಿ ಸಾಲಿನಲ್ಲಿ ನಿಂತುಕೊಂಡರೆ ಸೋಂಕು ಹರಡುವ ಸಾಧ್ಯತೆಗಳಿವೆ. ಹೀಗಾಗಿ ಎಲ್ಲಾ ರೈತರಿಗೂ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಕೆ ಮಾಡಲು ಹೆಚ್ಚುವರಿ ತಾತ್ಕಾಲಿಕ ಕೇಂದ್ರಗಳನ್ನು ತೆರೆಯಲು ರಾಜ್ಯ ಸರ್ಕಾರ ಸಮ್ಮತಿ ನೀಡಿದೆ.
ರಾಜ್ಯದಲ್ಲಿ 742 ರೈತ ಸಂಪರ್ಕ ಕೇಂದ್ರಗಳ ಮೂಲಕ ಬೀಜ ಹಾಗೂ ರಸಗೊಬ್ಬರ ಪೂರೈಕೆ ಮಾಡಲಾಗುತ್ತಿದೆ. ಮೇ ಮಧ್ಯ ಭಾಗದಿಂದ ಆರಂಭವಾಗಿ ಜೂನ್ ಮತ್ತು ಜುಲೈ 15 ದಿನಗಳು ಬಿತ್ತನೆ ಬೀಜಕ್ಕೆ ಹೆಚ್ಚಿನ ಬೇಡಿಕೆ ಇರುತ್ತದೆ.