ನವದೆಹಲಿ/ ಹೈದರಾಬಾದ್:ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿಯಾಗಿರುವ ಹೈದರಾಬಾದ್‌ನ ಉದ್ಯಮಿ ಪಿ ಶರತ್ಚಂದ್ರ ರೆಡ್ಡಿ ಶರಣಾಗಲು(ಅಪ್ರೂವರ್) ಒಪ್ಪಿಕೊಂಡಿದ್ದಾರೆ ಮಾಧ್ಯಮಗಳು ವರದಿ ಮಾಡಿವೆ. "ಪ್ರಕರಣದ ಬಗ್ಗೆ ಸ್ವಯಂಪ್ರೇರಿತವಾಗಿ ಸತ್ಯವನ್ನು ಬಹಿರಂಗಪಡಿಸಲು ನಾನು ಸಿದ್ಧನಿದ್ದೇನೆ ಮತ್ತು ಪ್ರಕರಣದಲ್ಲಿ ಅಪ್ರೂವರ್ ಆಗಲು ಬಯಸುತ್ತೇನೆ" ಎಂದು ರೆಡ್ಡಿ ಹೇಳಿದ್ದಾಗಿ ತಿಳಿದುಬಂದಿದೆ.
ಹೈದರಾಬಾದ್ ಮೂಲದ ಅರಬಿಂದೋ ಫಾರ್ಮಾ ಕಂಪನಿಯ ಮುಖ್ಯಸ್ಥರಾಗಿರುವ ರೆಡ್ಡಿ, ಮದ್ಯದ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು. ದೆಹಲಿ ಮದ್ಯ ಹಗರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ನಡೆಸುತ್ತಿರುವ ತನಿಖೆಯಲ್ಲಿ ಇವರ ಹೆಸರಿದ್ದು, ಬಂಧಿಸಲಾಗಿತ್ತು. ಈಚೆಗೆ ವೈದ್ಯಕೀಯ ಕಾರಣಗಳಿಗಾಗಿ ಜಾಮೀನು ನೀಡುವಂತೆ ಕೋರಿದ್ದು, ವಿಶೇಷ ನ್ಯಾಯಾಧೀಶ ಎಂ.ಕೆ.ನಾಗ್ಪಾಲ್ ಅವರು ಅರ್ಜಿಯ ವಿಚಾರಣೆ ನಡೆಸಿ ಮಂಜೂರು ಮಾಡಿದ್ದರು. ದೆಹಲಿ ಹೈಕೋರ್ಟ್ನಿಂದ ಜಾಮೀನು ಪಡೆದಿರುವ ಶರತ್ಚಂದ್ರ ರೆಡ್ಡಿ ಹೊರಗಿದ್ದಾರೆ.
ಇದೀಗ ಹೈಕೋರ್ಟ್ಗೆ ಸಲ್ಲಿಸಿರುವ ಅರ್ಜಿಯಲ್ಲಿ 'ತಾವು ಪ್ರಕರಣದಲ್ಲಿ ಇಡಿ ಮುಂದೆ ಶರಣಾಗಲು ಮತ್ತು ಸತ್ಯಗಳನ್ನು ಸ್ವಯಂಪ್ರೇರಿತವಾಗಿ ಬಹಿರಂಗಪಡಿಸುವುದಾಗಿ' ಹೇಳಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ. ಇದು ಪ್ರಕರಣದ ದಿಕ್ಕು ಬದಲಿಸುವ ಸಾಧ್ಯತೆ ಇದೆ.
ಇಡಿ ಆರೋಪವೇನು?:ಶರತ್ಚಂದ್ರ ರೆಡ್ಡಿ ಅವರು ನಡೆದಿದೆ ಎನ್ನಲಾದ ಹಗರಣದಲ್ಲಿ ಭಾಗಿಯಾಗಿದ್ದಾರೆ. ವಿವಿಧ ವ್ಯಾಪಾರ ಮಾಲೀಕರು ಮತ್ತು ರಾಜಕಾರಣಿಗಳೊಂದಿಗೆ ಇವರ ಲಿಂಕ್ ಹೊಂದಿದ್ದಾರೆ. ಮದ್ಯ ಮಾರಾಟ ಒಪ್ಪಂದದಲ್ಲಿ ಪಿತೂರಿ ನಡೆಸಿದ್ದಾರೆ. ದೆಹಲಿ ಅಬಕಾರಿ ನೀತಿಯಿಂದ ಲಾಭ ಪಡೆಯಲು ಮಾಲ್ಪ್ರಾಕ್ಟೀಸ್ ನಡೆಸಿದ್ದಾರೆ. ಅಬಕಾರಿ ನೀತಿಯ ಉದ್ದೇಶಗಳ ವಿರುದ್ಧವಾಗಿ ಕಾರ್ಟೆಲೈಸೇಶನ್ ಮೂಲಕ ಬೃಹತ್ ಮಾರುಕಟ್ಟೆ ಪಾಲನ್ನು ನಿಯಂತ್ರಿಸುವುದನ್ನು ರೆಡ್ಡಿ ಮಾಡಿದ್ದಾರೆ ಎಂದು ಇಡಿ ಈ ಹಿಂದೆ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿತ್ತು.