ಕರ್ನಾಟಕ

karnataka

ವೀರಶೈವ ಮಠಾಧೀಶರ ನಿಯೋಗದಿಂದ ಡಿಸಿಎಂ ಭೇಟಿ: ಕೇಸರಿ ಪಾಳಯದಲ್ಲಿ ಮಿಂಚಿನ ಸಂಚಲನ

By

Published : Jun 11, 2021, 3:55 PM IST

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಷಯ ಚರ್ಚಿತವಾಗುತ್ತಿರುವ ಕುರಿತು ಡಿಸಿಎಂ ಜೊತೆ ಮಠಾಧೀಶರು ಕೆಲಕಾಲ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

 Delegation of veerashaiva swamiji meet DCM ashwath narayan
Delegation of veerashaiva swamiji meet DCM ashwath narayan

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವದಂತಿ ಬೆನ್ನಲ್ಲೇ ಸಂಸ್ಕೃತ ವಿವಿ ವಿಷಯದ ನೆಪದಲ್ಲಿ ಮಠಾಧೀಶರ ನಿಯೋಗ ಡಿಸಿಎಂ ಡಾ. ಅಶ್ವತ್ಥ ನಾರಾಯಣ ಅವರನ್ನು ಭೇಟಿಯಾಗಿದ್ದು, ಬಿಜೆಪಿ ಪಾಳಯದಲ್ಲಿ ಹೊಸ ಸಂಚಲನ ಮೂಡಿಸಿದೆ.

ವಿವಿಧ ಜಿಲ್ಲೆಗಳ ವಿವಿಧ ಮಠಗಳ ಮೂವತ್ತಕ್ಕೂ ಹೆಚ್ಚು ಸ್ವಾಮೀಜಿಗಳು ಉಪ ಮುಖ್ಯಮಂತ್ರಿ ಡಾ. ಸಿ.ಎನ್.‌ಅಶ್ವತ್ಥ ನಾರಾಯಣ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ನಗರದ ಡಾಲರ್ಸ್‌ ಕಾಲೋನಿಯಲ್ಲಿರುವ ಡಿಸಿಎಂ ನಿವಾಸಕ್ಕೆ ಆಗಮಿಸಿದ ರಾಮನಗರ, ತುಮಕೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಶ್ರೀಗಳು, ಮಾಗಡಿ ತಾಲೂಕಿನಲ್ಲಿರುವ ಸಂಸ್ಕೃತ ವಿಶ್ವವಿದ್ಯಾಲಯವನ್ನು ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಮಾಡುವುದೂ ಸೇರಿ ಕೆಲವಾರು ವಿಷಯಗಳ ಕುರಿತು ಡಿಸಿಎಂ ಜೊತೆ ಚರ್ಚೆ ನಡೆಸಿದ್ದಾರೆ.

ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಕನ್ನಡಿಗರನ್ನೇ ನೇಮಕ ಮಾಡುವುದು ಹಾಗೂ ಸಂಸ್ಕೃತ ಪ್ರಸರಣೆಗೆ ಸೂಕ್ತ ಪ್ರೋತ್ಸಾಹ ಹಾಗೂ ಬಯಲುಸೀಮೆಯ ಈ ಜಿಲ್ಲೆಗಳಿಗೆ ನೀರಾವರಿ ಒದಗಿಸುವ ಬಗ್ಗೆ ಸ್ವಾಮೀಜಿಗಳು ಡಿಸಿಎಂ ಜತೆ ಚರ್ಚಿಸಿದ್ದಾರೆ.

ಸ್ವಾಮೀಜಿಗಳು ನೀಡಿದ ಮನವಿ ಪತ್ರ ಸ್ವೀಕರಿಸಿದ ಡಿಸಿಎಂ, ಅತಿ ಶೀಘ್ರದಲ್ಲೇ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಕೆಲಸಗಳನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿ, ನಮ್ಮ ಸರ್ಕಾರ ‌ನೀರಾವರಿ ಯೋಜನೆಗಳ ಅನುಷ್ಠಾಕ್ಕೆ ಆದ್ಯತೆ‌ ನೀಡಲಿದೆ‌ ಎಂದಿದ್ದಾರೆ.

ರಾಜಕೀಯ ಚರ್ಚೆ:

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಷಯ ಚರ್ಚಿತವಾಗುತ್ತಿರುವ ಕುರಿತು ಡಿಸಿಎಂ ಜೊತೆ ಮಠಾಧೀಶರು ಕೆಲಕಾಲ ಚರ್ಚೆ ನಡೆಸಿದರು ಎನ್ನಲಾಗಿದೆ.‌ ಸಿಎಂ ರಾಜೀನಾಮೆಯಂತಹ ಹೇಳಿಕೆ ನೀಡಿದ್ದು, ಯಡಿಯೂರಪ್ಪ ಅವರಿಗೆ ಪಕ್ಷದಲ್ಲಿ ಕೆಲವರಿಂದ ಆಗುತ್ತಿರುವ ಸಮಸ್ಯೆಗಳೇ ಇದಕ್ಕೆ ಕಾರಣ ಎನ್ನುವುದು ಸ್ಪಷ್ಟವಾಗಿದೆ. ಇಂತಹ ಚಟುವಟಿಕೆ ಬೇಸರ ತರಿಸಿದೆ ಎಂದು ಪಕ್ಷದ ಆಂತರಿಕ ಕಲಹಕ್ಕೆ ಮಠಾಧೀಶರು ಬೇಸರ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ. ನಾಯಕತ್ವ ಬದಲಾವಣೆಯಂತಹ ನಿರ್ಧಾರ ಕೈಗೊಂಡರೆ ಪಕ್ಷದ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರಲಿದೆ ಎಂದು ಸೂಚ್ಯವಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ಡಿಸಿಎಂ ನಿವಾಸಕ್ಕೆ ವೀರಶೈವ ಮಠಾಧೀಶರ ನಿಯೋಗ ಭೇಟಿ ನೀಡಿರುವುದು ರಾಜ್ಯ ಬಿಜೆಪಿ ಪಾಳಯದಲ್ಲಿ ಮಿಂಚಿನ ಸಂಚಲನ ಮೂಡಿಸಿದೆ. ಮುಖ್ಯಮಂತ್ರಿ ಸ್ಥಾನದ ರೇಸ್​​ನಲ್ಲಿ ಅಶ್ವತ್ಥ ನಾರಾಯಣ ಕೂಡ ಇದ್ದು, ಒಂದು ವೇಳೆ ನಾಯಕತ್ವ ಬದಲಾವಣೆ ಆಗುವುದೇ ಆದಲ್ಲಿ ಸಿಎಂ ಸ್ಥಾನ ಪಡೆಯಲು ಅಶ್ವತ್ಥ ನಾರಾಯಣ ಯತ್ನಿಸುತ್ತಿದ್ದಾರೆ. ಅದಕ್ಕಾಗಿ ವೀರಶೈವ ಮಠಾಧೀಶರ ಬೆಂಬಲ ಪಡೆಯುವ ಪ್ರಯತ್ನ ನಡೆಸುತ್ತಿದ್ದಾರಾ ಎನ್ನುವ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಅಖಿಲ ಭಾರತ ಸನಾತನ ಮಠಾಧಿಪತಿಗಳ ಒಕ್ಕೂಟದ ಸೇವಾ ಟ್ರಸ್ಟ್‌ ವತಿಯಿಂದ ಕೊಳದ ಮಠದ ಶಾಂತವೀರ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ತುಮಕೂರು ಹಿರೇಮಠದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಸೋಲೂರು ಚಿಲುಮ ಮಠದ ಬಸವಲಿಂಗ ಸ್ವಾಮೀಜಿ, ಭದ್ರಗಿರಿ ಮಠದ ವೀರಭದ್ರ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ತಮ್ಮಿಡಿಹಳ್ಳಿ ಮಠದ ಸಿದ್ದಲಿಂಗ ದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ಅನೇಕ ಶ್ರೀಗಳು ಆಗಮಿಸಿದ್ದರು.

ABOUT THE AUTHOR

...view details