ಸೂರತ್ (ಗುಜರಾತ್):ಗುಜರಾತ್ ಶಾಸಕರೊಬ್ಬರು ಸಲ್ಲಿಸಿದ ಕ್ರಿಮಿನಲ್ ಮಾನಹಾನಿ ಮೊಕದ್ದಮೆಯಲ್ಲಿ ತಮ್ಮ ಹೇಳಿಕೆಯನ್ನು ದಾಖಲಿಸಲು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಗುರುವಾರ ಸೂರತ್‌ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರಾಗಿ, 'ಮೋದಿ' ಉಪನಾಮ ಹೊಂದಿರುವ ಜನರ ಮೇಲೆ ಯಾವುದೇ ಮಾನಹಾನಿಕರ ಹೇಳಿಕೆ ನೀಡಿರುವುದನ್ನು ನಿರಾಕರಿಸಿದ್ದಾರೆ.
'ಮೋದಿ' ಉಪನಾಮ ಕುರಿತು ರಾಹುಕ್ ಗಾಂಧಿ ಹೇಳಿಕೆಗೆ ಸಂಬಂಧಿಸಿದಂತೆ ಸೂರತ್ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರು ಮೊಕದ್ದಮೆ ಹೂಡಿದ್ದಾರೆ.
ಸೂರತ್‌ನ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಸಿಜೆಎಂ) ಎ.ಎನ್. ದೇವ್ ಅವರ ಮುಂದೆ ನೀಡಿದ ಹೇಳಿಕೆಯಲ್ಲಿ, 2019ರ ಲೋಕಸಭಾ ಚುನಾವಣೆಗೆ ಮುನ್ನ ಕರ್ನಾಟಕದ ಕೋಲಾರನಲ್ಲಿ ನಡೆದ ರ್ಯಾಲಿಯಲ್ಲಿ ಮೋದಿ ಉಪನಾಮ ಹೊಂದಿರುವ ಜನರ ಬಗ್ಗೆ ಯಾವುದೇ ಮಾನಹಾನಿಕರ ಹೇಳಿಕೆ ನೀಡಿರುವುದನ್ನು ರಾಹುಲ್ ಗಾಂಧಿ ನಿರಾಕರಿಸಿದ್ದಾರೆ.
ಮೋದಿ ಉಪನಾಮ ಹೊಂದಿರುವ ಎಲ್ಲ ಜನರು ಕಳ್ಳರು ಎಂದು ಅವರು ಹೇಳಿದ್ದಾರೆಯೇ ಎಂದು ನ್ಯಾಯಾಲಯ ಕೇಳಿದಾಗ, ತಾನು ಎಂದಿಗೂ ಅಂತಹ ಮಾತುಗಳನ್ನು ಹೇಳಲಿಲ್ಲ ಎಂದು ಗಾಂಧಿ ಹೇಳಿದ್ದಾರೆ. ಇದಕ್ಕೂ ಮೊದಲು ರಾಹುಲ್ ಗಾಂಧಿ 2019ರ ಅಕ್ಟೋಬರ್‌ನಲ್ಲಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.