ಬೆಂಗಳೂರು:ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರ ಹಾಗೂ ಖಾಸಗಿಯವರ ಸಹಭಾಗಿತ್ವದಲ್ಲಿ ಒಂದು ಅಥವಾ ಎರಡು ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ವಿಧಾನಸೌಧದಲ್ಲಿ ಡಿಸಿಎಂ ಗೋವಿಂದ ಕಾರಜೋಳ ನೇತೃತ್ವದಲ್ಲಿ ನಡೆದ ತಾಂತ್ರಿಕ ಸಲಹಾ ಸಮಿತಿ ಸಭೆ ಬಳಿಕ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಿಸಿಸಿಯನ್ನು ಪ್ರತಿ ಜಿಲ್ಲೆ ಹಾಗೂ ತಾಲೂಕಿನಲ್ಲಿ ಮಾಡಬೇಕು. ಸ್ಥಳೀಯವಾಗಿ 50-100 ಬೆಡ್ ಸಾಮರ್ಥ್ಯದ ಸಿಸಿಸಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಈ ಕೇಂದ್ರಗಳಲ್ಲಿ 10-20 ಆಕ್ಸಿಜನ್ ಬೆಡ್ನ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
1.90 ಲಕ್ಷ ರೆಮ್ಡೆಸಿವಿರ್ ಔಷಧ ಖರೀದಿಸಲು ಹೊಸ ಆದೇಶ ನೀಡಿದ್ದೇವೆ. 7 ದಿನದಲ್ಲಿ ರಾಜ್ಯಕ್ಕೆ ಔಷಧ ಸರಬರಾಜು ಆಗಲಿದೆ. ತಾಂತ್ರಿಕ ಸಮಿತಿ ಸಭೆಯಲ್ಲಿ ಸಾಂಕ್ರಾಮಿಕ ರೋಗಕ್ಕೆ ಬೇಕಾದ ಮೆಡಿಸಿನ್ ಹಾಗೂ ಟೆಸ್ಟಿಂಗ್ ಕಿಟ್ಗಳ ಖರೀದಿಗೆ ತೀರ್ಮಾನ ಮಾಡಲಾಗಿದೆ. ಆರ್ಟಿ - ಪಿಸಿಆರ್ ಕಿಟ್ಸ್ ಖರೀದಿಗೆ ನಿರ್ಧರಿಸಲಾಗಿದೆ. ಹೋಮ್ ಐಸೋಲೇಷನ್ ಹಾಗೂ ಪಾಸಿಟಿವ್ ಬರುತ್ತಿದ್ದ ಹಾಗೆ ಆಪ್ತಮಿತ್ರದಿಂದ ಟೆಲಿಮೆಡಿಸಿನ್ ನೆರವಿನ ಕರೆ ಮಾಡಲಾಗುತ್ತದೆ. ಈ ಸಂಬಂಧ ಕಾಲ್ ಸೆಂಟರ್‌ನಲ್ಲಿ 1100 ಸಿಬ್ಬಂದಿ ಕೆಲಸ ಮಾಡಲಿದ್ದಾರೆ. ಈ ಕಾಲ್ ಸೆಂಟರ್ ಮೂಲಕ ಕರೆ ಮಾಡಿ ಸಲಹೆ ನೀಡಲಾಗುತ್ತದೆ ಎಂದರು.
ಆರು ತಿಂಗಳಿಗೆ ಕಾರ್ಯನಿರ್ವಹಿಸಲು 11 ಕೋಟಿ ರೂ. ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಇನ್ನು ಹೋಂ ಐಸೋಲೇಷನ್ನಲ್ಲಿರುವವರಿಗೆ ಮಾರ್ಗದರ್ಶನ ನೀಡಲು 20 ಕೋಟಿ ರೂ. ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದರು.
ಒಟ್ಟು 2,000 - 3000 ಹಾಸಿಗೆ ಸಾಮರ್ಥ್ಯದ ಮೇಕ್ ಶಿಪ್ಟ್ ಆಸ್ಪತ್ರೆಗಳನ್ನು 15 ರಿಂದ 20 ದಿನಗಳಲ್ಲಿ ಸ್ಥಾಪಿಸಲು ನಿರ್ಧಾರ ಮಾಡಲಾಗಿದೆ. ರಾಜೀವ್ ಗಾಂಧಿ, ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ಇವುಗಳನ್ನು ಸ್ಥಾಪಿಸಲಾಗುವುದು. ಜೊತೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 250 ಹಾಸಿಗೆಯ ಮೇಕ್ ಶಿಫ್ಟ್ ಆಸ್ಪತ್ರೆ ಮಾಡಲಾಗುವುದು. ಇನ್ನು 40,000 ಪೋರ್ಟೇಬಲ್ ಆಕ್ಸಿಜನ್ ಕಾನ್ಸಟ್ರೇಶನ್ನನ್ನು ಆಮದು ಮಾಡಲು ನಿರ್ಧರಿಸಲಾಗಿದೆ. ಮೇಕ್‌ಶಿಫ್ಟ್ ಆಸ್ಪತ್ರೆಗಳಲ್ಲಿ ಈ ಪೋರ್ಟೇಬಲ್ ಆಕ್ಸಿಜನ್ ಕಾನ್ಸಂಟ್ರೇಶನ್ಗಳನ್ನು ಬಳಸಲಾಗುವುದು ಎಂದರು.
ಅಂಕಿ- ಅಂಶ ಮುಚ್ಚಿಡುವ ಪ್ರಶ್ನೆ ಇಲ್ಲ:
ಕೊರೊನಾ ಸಂಬಂಧ ಅಂಕಿ ಸಂಖ್ಯೆಯನ್ನು ಮುಚ್ಚಿಡುವ ಕೆಲಸ ಮಾಡಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದರು. ಯಾವುದಾದರೂ ರಾಜ್ಯ ಅತ್ಯಂತ ಪಾರದರ್ಶಕವಾಗಿ ಅಂಕಿ - ಅಂಶಗಳನ್ನು ಜನರ ಮುಂದೆ ಇಡುತ್ತಿದ್ರೆ ಅದರಲ್ಲಿ ನಮ್ಮ ರಾಜ್ಯ ಮೊದಲಿನ ಸಾಲಿನಲ್ಲಿದೆ. ವಿರೋಧ ಪಕ್ಷದ ನಾಯಕರು ಅನಗತ್ಯವಾಗಿ ಆರೋಪ ಮಾಡಬಾರದು. ಆಡಳಿತ ಪಕ್ಷ ವಿರೋಧ ಪಕ್ಷ ಅಂತ ಇರಬಾರದು ಎಲ್ಲ ಒಟ್ಟಿಗೆ ಇರಬೇಕು. ಒಬ್ಬ ವ್ಯಕ್ತಿ ಇದನ್ನು ಮಾಡಲು ಸಾಧ್ಯವಿಲ್ಲ ಎಲ್ಲರೂ ಕೈ ಜೋಡಿಸಬೇಕು ಎಂದು ತಿಳಿಸಿದರು.