ಬೆಳಗಾವಿ:ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿಗೆ ಅಗತ್ಯವಿರುವ ಆಕ್ಸಿಜನ್, ರೆಮಿಡಿಸಿವಿರ್ ಒದಗಿಸುವುದರ ಜತೆಗೆ ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಜಾರಿಗೊಳಿಸಿರುವ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇದನ್ನು ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸುವಂತೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕೋವಿಡ್ ನಿಯಂತ್ರಣ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇದಲ್ಲದೆ ಮಾರ್ಗಸೂಚಿ ಪಾಲಿಸಲು ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕೂಡ ಕ್ರಮ ಕೈಗೊಳ್ಳಬೇಕು. ಆಕ್ಸಿಜನ್ ಲಭ್ಯತೆ ಬಗ್ಗೆ ನಿರಂತರ ನಿಗಾ ವಹಿಸಬೇಕು. ಖಾಸಗಿ ಅಥವಾ ಸರಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಉಂಟಾಗಬಾರದು. ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ 24 ತಾಸು ಕೆಲಸ ಮಾಡಬೇಕು. ವೈದ್ಯರು ಸ್ವತಃ ಕೋವಿಡ್ ವಾರ್ಡುಗಳಿಗೆ ಹೋಗಿ ನಿಯಮಿತವಾಗಿ ಪರಿಶೀಲಿಸಬೇಕು ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದರು.
ಗೋಕಾಕ, ಸವದತ್ತಿ ಹಾಗೂ ಬೆಳಗಾವಿ ಸೇರಿದಂತೆ ಕೆಲ ತಾಲೂಕುಗಳಲ್ಲಿ ಸೋಂಕಿನ ಪ್ರಮಾಣ ದಿಢೀರ್ ಹೆಚ್ಚಳವಾಗಿರುವುದಕ್ಕೆ ಆತಂಕ ವ್ಯಕ್ತಪಡಿಸಿದ ಸಚಿವರು, ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲು ತಿಳಿಸಿದರು. ಜಿಲ್ಲೆಯಲ್ಲಿ ಕೋವಿಡ್ ತಪಾಸಣೆಗೆ ಅಗತ್ಯವಿರುವ ಪ್ರಯೋಗಾಲಯದ ಸ್ಥಾಪನೆಗೆ ಅಗತ್ಯವಿರುವ ಪ್ರಸ್ತಾವವನ್ನು ಕಳಿಸಿದರೆ ಇದಕ್ಕೆ ಸರ್ಕಾರದ ಮಟ್ಟದಲ್ಲಿ ಮಂಜೂರಾತಿ ಒದಗಿಸಲಾಗುವುದು ಎಂದು ತಿಳಿಸಿದರು.
ಬಿಮ್ಸ್ಗೆ ಇನ್ನೊಂದು ಆಕ್ಸಿಜನ್ ಘಟಕ
ಬಿಮ್ಸ್ಗೆ ಇನ್ನೊಂದು ಆಕ್ಸಿಜನ್ ಸಂಗ್ರಹ ಘಟಕ ಸ್ಥಾಪಿಸಲು ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಗಿದೆ. ಈ ಕುರಿತು ಪ್ರಸ್ತಾವ ಸಲ್ಲಿಸಲು ತಿಳಿಸಿದರು.