ವಿಜಯಪುರ: ಆಲಮಟ್ಟಿ ಹಿನ್ನೀರಿನಿಂದ ಮುಳುಗಡೆಯಾದ ಕೋಲಾರ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ಪುನರ್ ವಸತಿ ಅಂಗವಾಗಿ ನಿವೇಶನ, ಹಕ್ಕುಪತ್ರ ನೀಡಿರುವ ಬಗ್ಗೆ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಜಯಪುರ: ಹಕ್ಕುಪತ್ರ ವಿತರಣೆ ಕುರಿತು ಪರಿಶೀಲಿಸುವಂತೆ ಜಿಲ್ಲಾಧಿಕಾರಿ ಸೂಚನೆ - ಕೃಷ್ಣಾ ಭಾಗ್ಯ ಜಲನಿಗಮ ಪುನರ್ ವಸತಿ ಯೋಜನೆ
ಕೋಲಾರ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಹಕ್ಕುಪತ್ರ ವಿತರಣೆಗೆ ಸಂಬಂಧಪಟ್ಟಂತೆ ಆಗಿರುವ ಲೋಪಗಳ ಬಗ್ಗೆ ಕೂಲಂಕಷವಾಗಿ ಪರಿಶೀಲಿಸುವಂತೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೋಲಾರ ಪಟ್ಟಣ ಪಂಚಾಯತಿಯ ಅಧಿಕಾರಿ ಮತ್ತು ಸಿಬ್ಬಂದಿ, ತಹಶೀಲ್ದಾರ್, ಉಪ ವಿಭಾಗ ಅಧಿಕಾರಿಗಳೊಂದಿಗೆ ಕೋಲಾರ ಪಟ್ಟಣ ಪಂಚಾಯತಿ ಕಚೇರಿಯಲ್ಲಿ ಸಭೆ ನಡೆಸಿದ ಅವರು, ಆಲಮಟ್ಟಿ ಹಿನ್ನೀರಿನಿಂದ ಮುಳುಗಡೆಯಾದ ಜನರ ಅನುಕೂಲಕ್ಕಾಗಿ ಕೃಷ್ಣಾ ಭಾಗ್ಯ ಜಲನಿಗಮ ಪುನರ್ ವಸತಿ ಯೋಜನೆಯಡಿ ಅರ್ಹ ಸಂತ್ರಸ್ತರಿಗೆ ನಿವೇಶನ, ಹಕ್ಕುಪತ್ರ ನೀಡದೆ ಇರುವ ಬಗ್ಗೆ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಈ ಹಕ್ಕುಪತ್ರ ವಿತರಣೆಗೆ ಸಂಬಂಧಪಟ್ಟಂತೆ ಆಗಿರುವ ಲೋಪಗಳ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.
ಕೋಲಾರ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕರು ಯಾವುದೇ ನಿವೇಶನ ಖರೀದಿಸುವಾಗ ಆಸ್ತಿಯ ನೈಜತೆಯನ್ನು ಪರಿಶೀಲಿಸಿ ಖರೀದಿ ಮಾಡುವಂತೆ ಮತ್ತು ಸೂಕ್ತ ದಾಖಲಾತಿಗಳನ್ನು ಮುಖ್ಯಾಧಿಕಾರಿಗಳಿಗೆ ನೀಡುವಂತೆ ಸೂಚಿಸಿದರು. ಜೊತೆಗೆ ಹಕ್ಕುಪತ್ರ ವಿತರಣೆ ಪರಿಶೀಲನೆಗೆ ಇಬ್ಬರು ಅಧಿಕಾರಿಗಳನ್ನು ನೇಮಿಸಿದ್ದು, ಈ ಕುರಿತು ವರದಿ ಸಲ್ಲಿಸುವಂತೆ ತಿಳಿಸಿದರು.