ಭಟ್ಕಳ:ಕೈಗಡಿಯಾರದಲ್ಲಿ ಚಿನ್ನ ಅಡಗಿಸಿಟ್ಟು ಸಾಗಿಸಿರುವ ಶಂಕೆಯ ಮೇಲೆ ಭಟ್ಕಳ ಮೂಲದ ವ್ಯಕ್ತಿಯನ್ನು ತಪಾಸಣೆಗೆಂದು ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು, ಆತನ ದುಬಾರಿ ಬೆಲೆ ಕೈಗಡಿಯಾರವನ್ನು ಜಪ್ತಿ ಮಾಡಿ ಅದನ್ನು ಪುಡಿಗಟ್ಟಿ ಚಿನ್ನಕ್ಕಾಗಿ ಹುಡುಕಾಟ ನಡೆಸಿದ ಘಟನೆ ಕೇರಳದ ಕ್ಯಾಲಿಕಟ್‍ನಲ್ಲಿ ನಡೆದಿದೆ.
ಓದಿ: ನಮ್ಮ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ: ಬಾಲಚಂದ್ರ ಜಾರಕಿಹೊಳಿ
ಭಟ್ಕಳ ಕಾರಗದ್ದೆ ನಿವಾಸಿ ಮಹ್ಮದ್ ಇಸ್ಮಾಯಿಲ್ ಅವರ ಸಹೋದರ ದುಬೈನಲ್ಲಿ ವ್ಯಾಪಾರ ವಹಿವಾಟು ಮಾಡಿಕೊಂಡಿದ್ದು, ಇಸ್ಮಾಯಿಲ್ ವಿಸಿಟಿಂಗ್ ವೀಸಾ ಪಡೆದುಕೊಂಡು ಸಹೋದರನ ಬಳಿ ತೆರಳಿದ್ದರು. ಇವರು ಊರಿಗೆ ವಾಪಸ್ಸಾಗುವ ನಿಟ್ಟಿನಲ್ಲಿ ಮಾ.3 ರಂದು ಕೇರಳದ ಕ್ಯಾಲಿಕಟ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಅಲ್ಲಿ ಹಾಜರಿದ್ದ ಕಸ್ಟಮ್ಸ್ ಅಧಿಕಾರಿಗಳು ಇಸ್ಮಾಯಿಲ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಅವರ ಕೈಯಲ್ಲಿದ್ದ ಗಡಿಯಾರವನ್ನು ಪಡೆದುಕೊಂಡ ಅಧಿಕಾರಿಗಳು ಕೋಣೆಯೊಳಗೆ ತೆಗೆದುಕೊಂಡು ಹೋಗಿ ಅದನ್ನು ಒಡೆದು ಹಾಕಿದ್ದಾರೆ. ಗಡಿಯಾರದಲ್ಲಿ ಚಿನ್ನ ಇಲ್ಲದಿರುವುದನ್ನು ದೃಢಪಡಿಸಿಕೊಂಡು ಪುಡಿಯಾದ ಗಡಿಯಾರವನ್ನು ಟ್ರೇನಲ್ಲಿ ಇಟ್ಟು ಇಸ್ಮಾಯಿಲ್ ಅವರಿಗೆ ಹಿಂದಿರುಗಿಸಿದ್ದಾರೆ. ಒಡೆದ ಗಡಿಯಾರ ಕಂಡು ಕಂಗಾಲಾದ ಇಸ್ಮಾಯಿಲ್, ತನ್ನ ಗಡಿಯಾರವನ್ನು ತನಗೆ ವಾಪಸ್ಸು ನೀಡುವಂತೆ ಪಟ್ಟು ಹಿಡಿದಿದ್ದಾರೆ. ಗಡಿಯಾರದ ಮೌಲ್ಯವನ್ನು ಕೇಳಿಸಿಕೊಂಡ ಕಸ್ಟಮ್ಸ್ ಅಧಿಕಾರಿಗಳೂ ತಬ್ಬಿಬ್ಬಾಗಿದ್ದಾರೆ. ಈ ಕುರಿತು ಇಸ್ಮಾಯಿಲ್ ಕ್ಯಾಲಿಕಟ್ ಪೊಲೀಸ್ ಠಾಣೆಯಲ್ಲಿ ಕಸ್ಟಮ್ಸ್ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.