ಬೆಂಗಳೂರು:ಮುಂದಿನ ವ್ಯಾಸಂಗಕ್ಕಾಗಿ ತಮ್ಮ ಸಾಮರ್ಥ್ಯವನ್ನು ಗುರುತಿಸಿಕೊಳ್ಳುವ ಅವಕಾಶ ದೊರಕಿಸಿಕೊಡಬೇಕೆನ್ನುವ ಮಹತ್ವದ ದೃಷ್ಟಿಯಿಂದ ಈ ಬಾರಿ ಎಸ್ಎಸ್ಎಲ್ಸಿ(SSLC) ಪರೀಕ್ಷೆ ನಡೆಸಲಾಗುತ್ತಿದೆ. ಈ ಕುರಿತು ಮಕ್ಕಳು ಮತ್ತು ಪೋಷಕರಲ್ಲಿ ಆತ್ಮವಿಶ್ವಾಸ ಮೂಡಿಸುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುಂಬರುವ ಎಸ್ಎಸ್ಎಲ್ಸಿ ಪರೀಕ್ಷೆಗಳ ಕುರಿತು ರಾಜ್ಯದ ಎಲ್ಲ 34 ಶೈಕ್ಷಣಿಕ ಜಿಲ್ಲೆಗಳ ಉಪನಿರ್ದೇಶಕರು, ಬಿಇಒ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಸಚಿವರು ಸೂಕ್ತ ಮಾರ್ಗದರ್ಶನಗಳನ್ನು ನೀಡಿದರು. ಈ ಬಾರಿಯ ಬದಲಾಗಿರುವ ಪರೀಕ್ಷೆ ಪದ್ಧತಿಯಲ್ಲಿ ಕುರಿತು ಮಕ್ಕಳಿಗೆ ಶಿಕ್ಷಕರು ಸೂಕ್ತ ತಿಳಿವಳಿಕೆ ನೀಡಲು ಕ್ರಮ ವಹಿಸಬೇಕು. ಎಲ್ಲದಕ್ಕಿಂತ ಮುಖ್ಯವಾಗಿ ಈ ಪರೀಕ್ಷೆಗಳನ್ನು ಕೋವಿಡ್-19 ಸೋಂಕು ತಹಬದಿಗೆ ಬಂದ ನಂತರವೇ ನಡೆಸಲಾಗುವುದು ಎಂಬ ಭರವಸೆಯನ್ನು ಮಕ್ಕಳು ಮತ್ತು ಪೋಷಕರಲ್ಲಿ ಮೂಡಿಸಬೇಕು ಎಂದು ಸೂಚನೆ ನೀಡಿದರು.
ಈ ವಾರಂತ್ಯಕ್ಕೆ ಮಾದರಿ ಪ್ರಶ್ನೆ ಪತ್ರಿಕೆಗಳು ಎಲ್ಲ ಶಾಲೆಗಳಿಗೆ ಆಯಾ ಬಿಇಒ ಕಚೇರಿಗಳ ಮೂಲಕ ತಲುಪಲಿವೆ. ಮಕ್ಕಳಿಗೆ ಓಎಂಆರ್ ಶೀಟ್ ರೂಪದಲ್ಲಿರುವ ಪ್ರಶ್ನೆ ಪತ್ರಿಕೆಗಳಿಗೆ ಹೇಗೆ ಉತ್ತರಿಸಬೇಕೆಂಬ ಕುರಿತು ಶಿಕ್ಷಕರು ಸಲಹೆ ನೀಡಬೇಕು. ಈಗಾಗಲೇ ಹಲವಾರು ಜಿಲ್ಲೆಗಳಲ್ಲಿ ಅಧಿಕಾರಿಗಳು ಮತ್ತು ಶಿಕ್ಷಕರು ವಿವಿಧ ರೀತಿಯಲ್ಲಿ ಮಕ್ಕಳನ್ನು ತಲುಪಿ ಪರೀಕ್ಷೆ ಕುರಿತು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿ ಪರೀಕ್ಷೆಗೆ ಸಜ್ಜುಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ಉಪಯುಕ್ತ ಮತ್ತು ಉತ್ತಮ ನಡೆಯನ್ನು ಉಳಿದ ಜಿಲ್ಲೆಗಳೂ ಅನುಸರಿಸಬೇಕೆಂದು ಸುರೇಶ್ ಕುಮಾರ್ ಹೇಳಿದರು.
ಮುಂದಿನ ವ್ಯಾಸಂಗವನ್ನು ಆಯ್ದುಕೊಳ್ಳುವ ನಿಟ್ಟಿನಲ್ಲಿ ಈ ಪರೀಕ್ಷೆಯು ದಿಕ್ಸೂಚಿಯಾಗಿರುವುದರಿಂದ ಪರೀಕ್ಷೆಯಲ್ಲಿ ತಲಾ ಒಂದು ವಿಷಯಕ್ಕೆ ತಲಾ 40 ಅಂಕದ ಪ್ರಶ್ನೆಪತ್ರಿಕೆಯಿದ್ದು, ಅದರಲ್ಲೇ ನಾಲ್ಕು ಉತ್ತರಗಳಲ್ಲಿ ಒಂದು ಉತ್ತರವನ್ನು ಗುರುತು ಮಾಡುವಂತಹ ಪ್ರಕ್ರಿಯೆ ಚಾಲ್ತಿಯಲ್ಲಿರಲಿದೆ. ಪ್ರಶ್ನೆಗಳು ನೇರ ಮತ್ತು ಸುಲಭವಾಗಿರುವುದರಿಂದ ಮಕ್ಕಳಿಗೆ ಹೆಚ್ಚಿನ ಗೊಂದಲವಾಗುವುದಿಲ್ಲ. ಆದರೂ ಈ ಕುರಿತು ಮಕ್ಕಳಿಗೆ ಸುಲಭವಾಗಿ ಅರ್ಥೈಸುವಂತೆ ಮಾಹಿತಿ ನೀಡಿ ಈ ಹೊಸ ಪದ್ಧತಿ ಕುರಿತು ಹೆಚ್ಚಿನ ಜಾಗೃತಿ ಮೂಡಿಸಲು ಕ್ರಮ ವಹಿಸಬೇಕಾದ ಅಗತ್ಯವಿದೆ ಎಂದು ಸಚಿವರು ತಿಳಿಸಿದರು.
ಹಲವಾರು ಸ್ತರದ ಜನರೊಂದಿಗೆ ಹಲವಾರು ಸುತ್ತಿನ ಚರ್ಚೆಗಳ ನಂತರ ಮಕ್ಕಳ ಹಿತದೃಷ್ಟಿಯಿಂದ ಕೇವಲ ಎರಡು ದಿನಗಳ ಪರೀಕ್ಷೆ ನಡೆಸಲಾಗುತ್ತಿದೆ. ಕಳೆದ ಬಾರಿಗಿಂತ ಹೆಚ್ಚಿನ ಸುರಕ್ಷತಾ ವಾತಾವರಣದಲ್ಲಿ ಪರೀಕ್ಷೆಗಳು ನಡೆಯುತ್ತಿದ್ದು, ಅದಕ್ಕಾಗಿ ಇಲಾಖೆ ಈಗಾಗಲೇ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು. ಮಕ್ಕಳ ಹಿತದೃಷ್ಟಿಯಿಂದ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗುತ್ತಿದ್ದು, ಕೋವಿಡ್-19ರ ಲಸಿಕೆ ಪಡೆದ ಶಿಕ್ಷಕರನ್ನೇ ಕೊಠಡಿ ಮೇಲ್ವಿಚಾರಕರನ್ನಾಗಿ ನೇಮಿಸಿಕೊಳ್ಳಬೇಕಾಗಿರುವುದರಿಂದ ಶಿಕ್ಷಕರಿಗೆ ಲಸಿಕೆ ನೀಡಲು ಕ್ರಮ ವಹಿಸುವಂತೆ ಈಗಾಗಲೇ ಆರೋಗ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಬಗ್ಗೆ ಕಲಬುರಗಿ, ಧಾರವಾಡ ಅಪರ ಆಯುಕ್ತರು ವಿಶೇಷ ಗಮನ ಹರಿಸಿ ಲಸಿಕೆ ಪಡೆದ ಶಿಕ್ಷಕರನ್ನೇ ಮೇಲ್ವಿಚಾರಕರನ್ನಾಗಿ ನೇಮಿಸಬೇಕೆಂದು ಸುರೇಶ್ ಕುಮಾರ್ ಸೂಚಿಸಿದರು.
ಕಳೆದ ವರ್ಷದಂತೆ ಸ್ಥಳೀಯ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರತಿನಿಧಿಗಳು ಸಮವಸ್ತ್ರದಲ್ಲಿ ಪರೀಕ್ಷಾ ಕೇಂದ್ರದಲ್ಲಿ ಹಾಜರಿದ್ದು, ಮಕ್ಕಳ ಸುರಕ್ಷತೆಗೆ ಮಾರ್ಗದರ್ಶನ ನೀಡಲಿದ್ದಾರೆ. ಕಳೆದ ಬಾರಿಯಂತೆ ಈ ಬಾರಿಯೂ ಮಕ್ಕಳು ತಮ್ಮ ವಾಸಸ್ಥಳದ ಸನಿಹದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಅವಕಾಶವಿದ್ದು, ಹೆಚ್ಚಿನ ಸಂಖ್ಯೆಯ ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದರು.