ಸೋಂಕು ಇಳಿಮುಖ: ಕೋವಿಡ್ ಪರೀಕ್ಷೆ ಕಡಿಮೆಗೊಳಿಸಿದ ಬಿಬಿಎಂಪಿ - BBMP covid management
ಕೋವಿಡ್ ಸೋಂಕು ಪರೀಕ್ಷೆಗೆ ಕಡಿಮೆ ಜನರನ್ನು ಒಳಪಡಿಸಿರುವುದರಿಂದ, ಕಡಿಮೆ ಜನರಲ್ಲಿ ಪಾಸಿಟಿವ್ ಕಂಡು ಬರುತ್ತಿದೆ. ಪರೀಕ್ಷೆ ಹೆಚ್ಚಿಸಿದರೆ ಮತ್ತಷ್ಟು ಪಾಸಿಟಿವ್ ಪ್ರಕರಣ ದೃಢಪಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
BBMP
By
Published : May 19, 2021, 9:17 PM IST
ಬೆಂಗಳೂರು:ನಗರದಲ್ಲಿ ಕಠಿಣ ಲಾಕ್ಡೌನ್ ಜಾರಿ ಮಾಡಿದ ಹಿನ್ನಲೆಯಲ್ಲಿ ಜನರ ಓಡಾಟ, ಗುಂಪುಗೂಡುವಿಕೆ ಕಡಿಮೆ ಆಗಿದೆ. ಹೀಗಾಗಿ ಸೋಂಕಿನ ಪ್ರಮಾಣದಲ್ಲೂ ಇಳಿಕೆಯಾಗಿದೆ. ಜನರು ಅನಗತ್ಯ ಓಡಾಡದೇ ಮನೆಯಲ್ಲೇ ಇದ್ದರೆ ಕೋವಿಡ್ ಸೋಂಕು ಹರಡುವುದನ್ನು ತಡೆಯಬಹುದು ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಕೋವಿಡ್ ಸೋಂಕು ಪರೀಕ್ಷೆಯಲ್ಲಿ ಇಳಿಮುಖವಾಗಿರುವುದರಿಂದ ಸಾಮಾನ್ಯ ಜನರಲ್ಲಿ ನಿಜವಾಗಿಯೂ ಕೋವಿಡ್ ಕಡಿಮೆಯಾಗುತ್ತಿದೆಯಾ ಎಂಬ ಗೊಂದಲ ಮೂಡಿಸಿದೆ. ಕೋವಿಡ್ ಸೋಂಕು ಪರೀಕ್ಷೆಗೆ ಕಡಿಮೆ ಜನರನ್ನು ಒಳಪಡಿಸಿರುವುದರಿಂದ, ಕಡಿಮೆ ಜನರಲ್ಲಿ ಪಾಸಿಟಿವ್ ಕಂಡುಬರುತ್ತಿದೆ. ಪರೀಕ್ಷೆ ಹೆಚ್ಚಿಸಿದರೆ ಮತ್ತಷ್ಟು ಪಾಸಿಟಿವ್ ಪ್ರಕರಣ ದೃಢಪಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಏಪ್ರಿಲ್ ಎರಡನೇ ವಾರದಲ್ಲಿ ನಿತ್ಯ 60 ರಿಂದ 80 ಸಾವಿರ ಸಂಖ್ಯೆಯಲ್ಲಿ ಕೋವಿಡ್ ಪರೀಕ್ಷೆಯನ್ನು ಮಾಡಲಾಗಿತ್ತು. ಮೂರನೇ ವಾರದಲ್ಲಿ 80 ರಿಂದ ಗರಿಷ್ಠ 98 ಸಾವಿರಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಿತ್ತು. ಆ ನಂತರ ಕಡಿಮೆಯಾಗುತ್ತಾ ಬಂದಿದ್ದು, ಏಪ್ರಿಲ್ ಕೊನೆಯ ವಾರದಲ್ಲಿ 60 ರಿಂದ 70 ಸಾವಿರ, ಮೇ ಮೊದಲ ವಾರದಲ್ಲಿ 40 ರಿಂದ 50 ಸಾವಿರ ಪರೀಕ್ಷೆ ಮಾಡಲಾಗಿದೆ. ಆದರೆ ಈಗ ಅದನ್ನು 30 ಸಾವಿರಕ್ಕಿಂತಲೂ ಕಡಿಮೆ ಮಾಡುತ್ತಿದೆ.
ಸದ್ಯ ಸಮಾಧಾನಕರ ವಿಷಯ ಅಂದರೆ, ಮೇ 15 ರಂದು ಶೇ 37.94 ಇದ್ದ ಪಾಸಿಟಿವಿಟಿ ಪ್ರಮಾಣ ಮೇ 18 ರ ವೇಳೆಗೆ ಶೇ36.07 ಕ್ಕೆ ಇಳಿಕೆಯಾಗಿದೆ. ಟೆಸ್ಟಿಂಗ್ ಪ್ರಮಾಣ ಕೂಡಾ ಗಣನೀಯವಾಗಿ ಇಳಿಮುಖವಾಗಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ.
ಹೊಸ ಪ್ರಕರಣ
ಸಾವು
ಟೆಸ್ಟಿಂಗ್
ಏಪ್ರಿಲ್ 30
26756
93
64288
ಮೇ 15
13402
94
38599
ಮೇ 16
8344
143
42642
ಮೇ 17
13338
239
27943
ಮೇ 18
8676
298
50021
ಇಂದು (ಮೇ 19)ರಂದು ಕೂಡಾ ಕೋವಿಡ್ ಸೋಂಕಿನಲ್ಲಿ ಇಳಿಕೆ ಕಂಡಿದ್ದು,11,793 ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ. ಮೇ 2ರಂದು 21,199 ಜನರಲ್ಲಿ ಪಾಸಿಟಿವ್ ಬಂದಿದ್ದು, 55,709 ಟೆಸ್ಟ್ ನಡೆಸಲಾಗಿತ್ತು. ಪಾಸಿಟಿವಿಟಿ ದರ ಶೇ 38.05 ಇದೆ. ಮೇ 9 ರಂದು, 20,897 ಪಾಸಿಟಿವ್ ಬಂದಿದ್ದು, 51,772 ಟೆಸ್ಟಿಂಗ್ ನಡೆಸಿದ್ದರು. ಶೇ 38. 86ರಷ್ಟು ಪಾಸಿಟಿವಿಟಿ ದರ ಇದೆ. ಮೇ 10ರಂದು 16,747 ಪಾಸಿಟಿವ್ ಬಂದಿದ್ದು, 374 ಮಂದಿ ಮೃತಪಟ್ಟಿದ್ದರು. 32,862 ಟೆಸ್ಟಿಂಗ್ ನಡೆದಿದ್ದು, ಶೇ 39.68 ಪಾಸಿಟಿವಿಟಿ ದರ ಇತ್ತು. ಮೇ 10 ರ ನಂತರ ಕೋವಿಡ್ ಪ್ರಕರಣ 20,000ದಿಂದ ಇಳಿಕೆ ಕಂಡು 15 ಸಾವಿರದ ಆಸುಪಾಸಿಗೆ ಬಂದಿದೆ.
ನಗರದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಇಳಿಕೆಯಾಗಿದ್ದರೂ, ಸಕ್ರಿಯ ಪ್ರಕರಣಗಳ ಸಂಖ್ಯೆ ಅಧಿಕವಾಗಿಯೇ ಇದೆ. ದೇಶದಲ್ಲೆ ಅಧಿಕ ಸಕ್ರಿಯ ಪ್ರಕರಣಗಳ ನಗರದಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ.
ಇನ್ನು ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಸದ್ಯ ಲಾಕ್ಡೌನ್ ಚಾಲನೆಯಲ್ಲಿರುವುದರಿಂದ ಜನ ಗುಂಪು ಸೇರುವುದು ಕಡಿಮೆಯಾಗಿದೆ. , ಬಸ್ ನಿಲ್ದಾಣ ಮಾರುಕಟ್ಟೆಗಳಲ್ಲಿ ಪರೀಕ್ಷೆ ನಡೆಯುತ್ತಿಲ್ಲ. ಕೇವಲ ಸೋಂಕಿತರ ಸಂಪರ್ಕಿತರನ್ನು ಹಾಗೂ ಗುಣಲಕ್ಷಣ ಇರುವವರನ್ನು ಮಾತ್ರ ಪರೀಕ್ಷೆಗೊಳಪಡಿಸಲಾಗುತ್ತಿದೆ. ಸೋಂಕು ಪರೀಕ್ಷೆಯಲ್ಲಿ ಕಡಿಮೆ ಮಾಡಿಲ್ಲ, ಜನರ ಓಡಾಟದ ನಿರ್ಬಂಧದಿಂದ ಕೋವಿಡ್ ನಿಯಂತ್ರಣಕ್ಕೆ ಬಂದಿದೆ ಎಂದರು.